ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಹಿನ್ನೆಲೆಯಲ್ಲಿ ಯುವ ವೇಗದ ಬೌಲರ್ ದೀಪಕ್ ಚಹರ್, ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಟೀಂ ಇಂಡಿಯಾವನ್ನ ಸೇರಿಕೊಂಡಿದ್ದಾರೆ.
ಐದು ಪಂದ್ಯಗಳ ಸರಣಿ ಹಿನ್ನೆಲೆಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ವೇಗದ ಬೌಲರ್ ಮುಖೇಶ್ ಕುಮಾರ್, ತಮ್ಮ ವಿವಾಹದ ಹಿನ್ನಲೆಯಲ್ಲಿ ತಂಡದಿಂದ ಕೈಬಿಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸರಣಿಯ 4ನೇ ಹಾಗೂ 5ನೇ ಟಿ20 ಪಂದ್ಯಗಳಿಂದ ಮುಖೇಶ್ ಕುಮಾರ್ ಅವರನ್ನ ತಂಡದಿಂದ ಕೈಬಿಡಲು ತೀರ್ಮಾನಿಸಿದ ಬಿಸಿಸಿಐ, ಇವರ ಸ್ಥಾನಕ್ಕೆ ದೀಪಕ್ ಚಹರ್ ಅವರನ್ನ ತಂಡಕ್ಕೆ ಆಯ್ಕೆ ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡುವ ಅವಕಾಶ ಪಡೆದಿರುವ ಮುಖೇಶ್ ಕುಮಾರ್, ವಿವಾಹದ ಕಾರಣದಿಂದಾಗಿ ಗುವಾಹತಿಯಲ್ಲಿ ನಡೆದ 3ನೇ ಟಿ20 ಪಂದ್ಯಕ್ಕೂ ಮುನ್ನ ತಂಡದಿಂದ ಕೈಬಿಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಬಿಸಿಸಿಐ, ಮುಖೇಶ್ ಕುಮಾರ್ ಅವರಿಗೆ ರಜೆ ನೀಡಿದ್ದು, ಆದರೆ ಮುಖೇಶ್, ಡಿ.1ರಂದು ನಾಲ್ಕನೇ ಟಿ20 ಪಂದ್ಯದ ವೇಳೆಗೆ ರಾಯ್‌ಪುರ್‌ನಲ್ಲಿ ಭಾರತ ತಂಡವನ್ನ ಸೇರಲಿದ್ದಾರೆ.
ಈ ನಡುವೆ ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ದೀಪಕ್ ಚಹರ್ ಕೂಡ ಭಾರತ ತಂಡಕ್ಕೆ ಸೇರಿಕೊಂಡಿದ್ದಾರೆ. ಚಹರ್ 2022ರ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಗಾಯದ ಸಮಸ್ಯೆಯಿಂದಾಗಿ ಭಾರತ ತಂಡದಲ್ಲಿ ಮಾತ್ರವಲ್ಲದೇ ಐಪಿಎಲ್‌ನಲ್ಲೂ ಸಹ ಆಡುವ ಅವಕಾಶದಿಂದ ವಂಚಿತರಾಗಿದ್ದರು. ಆದರೆ ಈ ವರ್ಷದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ದೀಪಕ್ ಚಹರ್ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ರಾಜಸ್ಥಾನ್ ಪರ ಆಡಿರುವ 5 ಪಂದ್ಯಗಳಲ್ಲಿ 13.90 ಸರಾಸರಿಯಲ್ಲಿ 10 ವಿಕೆಟ್‌ಗಳನ್ನ ಪಡೆಯುವ ಮೂಲಕ ಮಿಂಚಿದ್ದಾರೆ.
IND v AUS, Deepak Chahar, Mukesh Kumar, Team India, Australia