ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್‌ನಿಂದ ಅಬ್ಬರಿಸಿದ್ದಾರೆ. ಟೀಂ ಇಂಡಿಯಾ ವಿರುದ್ಧದ 3ನೇ ಟಿ20ಯಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ ಮ್ಯಾಕ್ಸ್‌ವೆಲ್(104*) ಭರ್ಜರಿ ಶತಕ ಸಿಡಿಸಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ್ದಾರೆ.
ಗುವಾಹತಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 223 ರನ್‌ಗಳ ಬೃಹತ್ ಟಾರ್ಗೆಟ್ ಚೇಸ್ ಮಾಡುವಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದ ಗ್ಲೆನ್ ಮ್ಯಾಕ್ಸ್‌ವೆಲ್(104* ರನ್‌ಗಳು, 48 ಬಾಲ್, 8 ಬೌಂಡರಿ, 8 ಸಿಕ್ಸ್) ಬರೋಬ್ಬರಿ 216.67ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ಗಳಿಸುವ ಮೂಲಕ ಆಸೀಸ್‌ಗೆ 5 ವಿಕೆಟ್‌ಗಳ ಅದ್ಭುತ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 5 ಪಂದ್ಯಗಳ ಟಿ20 ಸರಣಿಯಲ್ಲಿ ತನ್ನ ಮೊದಲ ಗೆಲುವು ಕಂಡಿದೆ.
ಟೀಂ ಇಂಡಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿದ ಮ್ಯಾಕ್ಸ್‌ವೆಲ್, ಆ ಮೂಲಕ ಟಿ20ಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಅವರ ದಾಖಲೆ ಸರಿಗಟ್ಟಿದ್ದಾರೆ. ಟಿ20ಯಲ್ಲಿ ಅದ್ಭುತ ಬ್ಯಾಟಿಂಗ್ ದಾಖಲೆ ಹೊಂದಿರುವ ಹಿಟ್‌ಮ್ಯಾನ್ ರೋಹಿತ್ ಶರ್ಮಾ(140 ಇನ್ನಿಂಗ್ಸ್) ಈವರೆಗೂ 4 ಶತಕಗಳನ್ನ ಸಿಡಿಸಿದ್ದರೆ, ಇದೀಗ ಗ್ಲೆನ್ ಮ್ಯಾಕ್ಸ್‌ವೆಲ್(92 ಇನ್ನಿಂಗ್ಸ್) 4ನೇ ಟಿ20 ಶತಕ ದಾಖಲಿಸುವ ಮೂಲಕ ಈ ದಾಖಲೆ ಸರಿಗಟ್ಟಿದ್ದಾರೆ.
ಸರಣಿ ಜೀವಂತವಾಗಿರಿಸಲು 3ನೇ ಟಿ20ಯಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದ ಆಸೀಸ್ ಪಡೆಗೆ ಆಸರೆಯಾದ ಮ್ಯಾಕ್ಸಿ, ಭಾರತದ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದರು. ಕೇವಲ 47 ಬಾಲ್‌ಗಳಲ್ಲಿ ಶತಕದ ಸಂಭ್ರಮ ಆಚರಿಸಿದ ಸ್ಟಾರ್ ಆಲ್ರೌಂಡರ್, ಆ ಮೂಲಕ ಟಿ20ಯಲ್ಲಿ ಆಸ್ಟ್ರೇಲಿಯಾ ಪರವಾಗಿ ವೇಗದ ಶತಕ ಸಿಡಿಸಿದ್ದ ಜೋಶ್ ಇಂಗ್ಲಿಸ್ ಹಾಗೂ ಆರನ್ ಫಿಂಚ್ ಅವರುಗಳ ದಾಖಲೆಯನ್ನ ಕೂಡ ಸರಿಗಟ್ಟಿದರು.
IND v AUS, Glenn Maxwell, Rohit Sharma, Team India, Australia