ಟೀಂ ಇಂಡಿಯಾದ ʼಮಿ.306ʼ ಖ್ಯಾತಿಯ ಸೂರ್ಯಕುಮಾರ್ ಯಾದವ್, ತಮ್ಮ ಚೊಚ್ಚಲ ನಾಯಕತ್ವದಲ್ಲಿ ಭಾರತಕ್ಕೆ ಗೆಲುವು ತಂದುಕೊಡುವ ಮೂಲಕ ಗೆಲುವಿನೊಂದಿಗೆ ನಾಯಕತ್ವದ ಪಯಣ ಆರಂಭಿಸಿದ್ದಾರೆ.
ವಿಶಾಖಪಟ್ಟಣಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ 2 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಆಸೀಸ್ ವಿರುದ್ಧದ ಈ ಗೆಲುವಿನ ಮೂಲಕ ಮೊದಲ ಬಾರಿಗೆ ಟೀಂ ಇಂಡಿಯಾದ ಕ್ಯಾಪ್ಟನ್ ಜವಾಬ್ದಾರಿ ಹೊತ್ತಿದ್ದ ಸೂರ್ಯಕುಮಾರ್ ಯಾದವ್, ಜಯದ ಮೂಲಕ ತಮ್ಮ ನಾಯಕತ್ವದ ಮೊದಲ ಹೆಜ್ಜೆಯಿಟ್ಟದ್ದಾರೆ. ಭಾರತದ ಈ ಜಯದಲ್ಲಿ ಸೂರ್ಯಕುಮಾರ್(80) ಜವಾಬ್ದಾರಿಯ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಟಿ20ಯಲ್ಲಿ ಭಾರತದ 13ನೇ ಕ್ಯಾಪ್ಟನ್:
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕನಾಗಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್, ಆ ಮೂಲಕ ಟಿ20ಯಲ್ಲಿ ಭಾರತವನ್ನ ಮುನ್ನಡೆಸಿದ 13ನೇ ಕ್ಯಾಪ್ಟನ್ ಎನಿಸಿದರು. ಸೂರ್ಯಕುಮಾರ್ ಅವರಿಗೂ ಮುನ್ನ ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ, ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್, ರಿಷಬ್ ಪಂತ್, ಅಜಿಂಕ್ಯ ರಹಾನೆ ಮತ್ತು ಜಸ್ಪ್ರೀತ್ ಬುಮ್ರಾ ಅವರುಗಳು ಟಿ20ಯಲ್ಲಿ ಭಾರತವನ್ನ ಮುನ್ನಡೆಸಿದ 12 ಮಂದಿ ಕ್ಯಾಪ್ಟನ್‌ಗಳಾಗಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ ಹೆಚ್ಚು ಪಂದ್ಯಗಳಲ್ಲಿ ಭಾರತವನ್ನ ಮುನ್ನಡೆಸಿರುವ ಹೆಗ್ಗಳಿಕೆ ಎಂಎಸ್ ಧೋನಿ ಅವರಿಗಿದ್ದು, 72 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಇವರ ನಂತರದಲ್ಲಿ ರೋಹಿತ್ ಶರ್ಮಾ(51 ಪಂದ್ಯ), ವಿರಾಟ್ ಕೊಹ್ಲಿ(50 ಪಂದ್ಯ), ಹಾರ್ದಿಕ್ ಪಾಂಡ್ಯ(16 ಪಂದ್ಯ) ತಂಡದ ನಾಯಕರಾಗಿದ್ದಾರೆ. ಉಳಿದಂತೆ ರಿಷಬ್ ಪಂತ್ ಐದು ಪಂದ್ಯಗಳಲ್ಲಿ ನಾಯಕರಾಗಿದ್ದರೆ, ಸುರೇಶ್ ರೈನಾ, ಶಿಖರ್ ಧವನ್ ಮತ್ತು ಋತುರಾಜ್ ಗಾಯಕ್ವಾಡ್ ತಲಾ ಮೂರು ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಋತುರಾಜ್ ಗಾಯಕ್ವಾಡ್, ತಂಡದ ಕ್ಯಾಪ್ಟನ್ ಜವಾಬ್ದಾರಿ ನಿರ್ವಹಿಸಿದ್ದರು. ಇನ್ನೂ ಜಸ್ಪ್ರೀತ್ ಬುಮ್ರಾ ಮತ್ತು ಸೆಹ್ವಾಗ್ ತಲಾ 2 ಪಂದ್ಯಗಳಲ್ಲಿ ನಾಯಕರಾಗಿದ್ದರೆ, ಕೆಎಲ್ ರಾಹುಲ್ ಒಂದು ಪಂದ್ಯದಲ್ಲಿ ಭಾರತವನ್ನ ಮುನ್ನಡೆಸಿದರು.
IND v AUS, Team India, Australia, Suryakumar Yadav, T20I Series