ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಸರ್ವಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮಿಂಚಿದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, 2023ರ ವಿಶ್ವಕಪ್ನ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಪ್ರಸಕ್ತ ವಿಶ್ವಕಪ್ನಲ್ಲಿ ಅದ್ಭುತ ಬ್ಯಾಟಿಂಗ್ ಫಾರ್ಮ್ ಹೊಂದಿದ್ದ ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೂರ್ನಿಯಲ್ಲಿ ಬಲಿಷ್ಠ ತಂಡಗಳ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಜೊತೆಗೆ ಹಲವು ದಾಖಲೆಗಳನ್ನ ಸರಿಗಟ್ಟಿದ ಚೇಸ್ ಮಾಸ್ಟರ್ ಕೊಹ್ಲಿ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲಿನ ಆಘಾತ ಅನುಭವಿಸಿದರು, ಟೂರ್ನಿಯಲ್ಲಿ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ನಿರೀಕ್ಷೆಯಂತೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಫೈನಲ್ ಸೇರಿದಂತೆ 11 ಪಂದ್ಯಗಳನ್ನ ಆಡಿದ ವಿರಾಟ್ ಕೊಹ್ಲಿ, 95.62ರ ಸರಾಸರಿಯಲ್ಲಿ 765 ರನ್ಗಳಿಸಿ ಮಿಂಚಿದ್ದಾರೆ. ಕೊಹ್ಲಿ ಅವರ ಈ ಪ್ರದರ್ಶನ ವಿಶ್ವಕಪ್ ಟೂರ್ನಿಯ ಒಂದು ಆವೃತ್ತಿಯಲ್ಲಿ ಓರ್ವ ಬ್ಯಾಟರ್ ದಾಖಲಿಸಿದ ಗರಿಷ್ಠ ರನ್ ಆಗಿದೆ. ವಿರಾಟ್ ಕೊಹ್ಲಿ ಅವರ ಈ ಪ್ರದರ್ಶನದಲ್ಲಿ 6 ಅರ್ಧಶತಕ ಹಾಗೂ 3 ಶತಕಗಳು ಒಳಗೊಂಡಿದೆ.
ಅಂದು ಸಚಿನ್, ಇಂದು ಕೊಹ್ಲಿ:
2023ರ ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ, ಫೈನಲ್ ಸೋಲಿನ ನಡುವೆಯೂ ಈ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಈ ಹಿಂದೆ 2003ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಫೈನಲ್ನಲ್ಲಿ ಸೋಲಿನ ಆಘಾತ ಕಂಡರು, ಟೂರ್ನಿಯಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನದಿಂದ ಸಚಿನ್ ತೆಂಡುಲ್ಕರ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
IND v AUS, Team India, Australia, Virat Kohli, ODI World Cup