IND v BAN: ಗಿಲ್, ಅಕ್ಸರ್ ಹೋರಾಟ ವ್ಯರ್ಥ: ಬಾಂಗ್ಲಾ ವಿರುದ್ಧ ಸೋತ ಭಾರತ…
IND v BAN: Gill, Aksar struggle in vain: India lost against Bangladesh
ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್(121) ಹಾಗೂ ಆಲ್ರೌಂಡರ್ ಅಕ್ಸರ್ ಪಟೇಲ್(42) ಹೋರಾಟದ ನಡುವೆಯೂ ಏಷ್ಯಾಕಪ್ ಪಂದ್ಯಾವಳಿಯ ಸೂಪರ್-4 ಹಂತದ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ 6 ರನ್‌ಗಳ ಸೋಲನುಭವಿಸಿತು. ಈ ಸೋಲಿನೊಂದಿಗೆ ರೋಹಿತ್ ಪಡೆ ಸೋಲಿನ ಆಘಾತದೊಂದಿಗೆ ಫೈನಲ್‌ನತ್ತ ಮುಖ ಮಾಡಿದರೆ. ಶಕೀಬ್ ಸಾರಥ್ಯದ ಬಾಂಗ್ಲಾ ತಂಡ ಗೆಲುವಿನ ಖುಷಿಯೊಂದಿಗೆ ತವರಿಗೆ ಹಿಂದಿರುಗುತ್ತಿದೆ.
ಸೂಪರ್-4ನಲ್ಲಿ ಈಗಾಗಲೇ ಸತತ ಎರಡು ಗೆಲುವಿನೊಂದಿಗೆ ಭಾರತ ತಂಡ ಫೈನಲ್ ಪ್ರವೇಶಿಸಿದ್ದರೆ. ಎರಡು ಸೋಲಿನ ಆಘಾತದೊಂದಿಗೆ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಈ ಪಂದ್ಯ ಎರಡು ತಂಡಗಳಿಗೂ ಅನೌಪಚಾರಿಕ ಪಂದ್ಯವಾಗಿತ್ತು. ಹೀಗಾಗಿ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ ಭಾರತ ಯುವ ಆಟಗಾರರಿಗೆ ಕಣಕ್ಕಿಳಿಯುವ ಅವಕಾಶ ನೀಡಿತ್ತು.
ಕೊಲಂಬೊದ ಆರ್ ಪ್ರೇಮದಾಸ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ, 50 ಓವರ್‌ಗಳಲ್ಲಿ 8 ವಿಕೆಟ್‌ಗೆ 265 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಬಾಂಗ್ಲಾದೇಶದ ಪರ ಶಕೀಬ್(80), ಹ್ರಿದೋಯ್(54) ಹಾಗೂ ನಸುಮ್ ಅಹ್ಮದ್(44) ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡಕ್ಕೆ ಆಸರೆಯಾದರು. ಭಾರತದ ಪರ ಶಾರ್ದೂಲ್(3/65), ಶಮಿ(2/32) ಉತ್ತಮ ಬೌಲಿಂಗ್ ಪ್ರದರ್ಶಿಸಿದರೆ. ಪ್ರಸಿದ್ಧ ಕೃಷ್ಣ, ರವೀಂದ್ರ ಜಡೇಜಾ ಹಾಗೂ ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಬಾಂಗ್ಲಾ ತಂಡದ 266 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಭಾರತ ಮೊದಲ ಓವರ್‌ನಲ್ಲೇ ನಾಯಕ ರೋಹಿತ್ ಶರ್ಮಾ(0) ವಿಕೆಟ್ ಕಳೆದುಕೊಂಡಿತು. ನಂತರ ಬಂದ ತಿಲಕ್ ವರ್ಮಾ(5) ತಮ್ಮ ಚೊಚ್ಚಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ 3ನೇ ವಿಕೆಟ್‌ಗೆ ಜೊತೆಯಾದ ಕೆಎಲ್ ರಾಹುಲ್ ಹಾಗೂ ಶುಭ್ಮನ್ ಗಿಲ್ 57 ರನ್‌ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಬೌಲಿಂಗ್ ದಾಳಿಗಿಳಿದ ಮೆಹಿದಿ ಹಸನ್ ಉತ್ತಮವಾಗಿ ಆಡುತ್ತಿದ್ದ ರಾಹುಲ್(19) ಅವರ ವಿಕೆಟ್ ಪಡೆದು ತಂಡಕ್ಕೆ ಮೇಲುಗೈ ನೀಡಿದರು. ಬಳಿಕ ಕಣಕ್ಕಿಳಿದ ಸೂರ್ಯಕುಮಾರ್ (26), ರವೀಂದ್ರ ಜಡೇಜಾ(7) ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ಆದರೆ ಒಂದೆಡೆ ವಿಕೆಟ್ ಬೀಳುತ್ತಿದ್ದರು ಜವಾಬ್ದಾರಿಯ ಆಟವಾಡಿದ ಶುಭ್ಮನ್ ಗಿಲ್(121) ಭರ್ಜರಿ ಬ್ಯಾಟಿಂಗ್ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 5ನೇ ಶತಕ ಸಿಡಿಸಿ ಮಿಂಚಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಗಿಲ್ ನಿರ್ಣಾಯಕ ಹಂತದಲ್ಲಿ ತಮ್ಮ ವಿಕೆಟ್ ಕೈಚಲ್ಲಿದರು. ಕೊನೆಯಲ್ಲಿ ಜೊತೆಯಾದ ಅಕ್ಷರ್ ಪಟೇಲ್(42) ಮತ್ತು ಶಾರ್ದುಲ್ ಥಾಕೂರ್(11) ಹೋರಾಟ ನಡೆಸಿದರು ತಂಡಕ್ಕೆ ಗೆಲುವು ತಂದುಕೊಡಲು ಆಗಲಿಲ್ಲ. ಪರಿಣಾಮ 49.5 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟ್ ಆಗಿ 6 ರನ್‌ಗಳ ಸೋಲು ಕಂಡಿತು.
ಬಾಂಗ್ಲಾ ಪರ ಮುಸ್ತಫಿಜು಼ರ್ 3 ವಿಕೆಟ್ ಪಡೆದರೆ, ತಂಜಿ಼ಮ್ ಹಾಗೂ ಮೆಹಿದಿ ತಲಾ 2 ವಿಕೆಟ್ ಪಡೆದರು. ಜವಾಬ್ದಾರಿಯ ಆಟದ ಮೂಲಕ ತಂಡದ ಗೆಲುವಿಗೆ ಕಾರಣವಾದ ನಾಯಕ ಶಕೀಬ್-ಅಲ್-ಹಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.








