ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ 50 ಸಿಕ್ಸರ್‌ಗಳನ್ನ ಬಾರಿಸುವ ಮೂಲಕ ಭಾರತದ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಪಡೆದು ಮಿಂಚಿದ್ದಾರೆ.
ಪ್ರಸಕ್ತ ವಿಶ್ವಕಪ್‌ನಲ್ಲಿ ಅದ್ಭುತ ಬ್ಯಾಟಿಂಗ್ ಲಯ ಕಂಡುಕೊಂಡಿರುವ ಹಿಟ್‌ಮ್ಯಾನ್ ರೋಹಿತ್ ಶರ್ಮಾ, ಧರ್ಮಶಾಲಾದಲ್ಲಿ ನಡೆದ ಕಿವೀಸ್ ವಿರುದ್ಧದ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದರು. ಇನ್ನಿಂಗ್ಸ್ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ರೋಹಿತ್ ಶರ್ಮಾ, 40 ಬಾಲ್‌ಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸ್ ಮೂಲಕ 46 ರನ್‌ಗಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೇ ಶುಭ್ಮನ್ ಗಿಲ್ ಜೊತೆಗೂಡಿ ಮೊದಲ ವಿಕೆಟ್‌ಗೆ 71 ರನ್‌ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಕಿವೀಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ಸಿಕ್ಸ್ ಬಾರಿಸಿ ಅಬ್ಬರಿಸಿದ ರೋಹಿತ್, ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ 50 ಸಿಕ್ಸ್‌ಗಳನ್ನ ಬಾರಿಸಿ ಮಿಂಚಿದರು. ಅಲ್ಲದೇ ಆ ಪ್ರದರ್ಶನದ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ಹಾಗೂ ಟೀಂ ಇಂಡಿಯಾದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಭಾಜನರಾದರು. ಪ್ರಸಕ್ತ ವರ್ಷದಲ್ಲಿ ಆಡಿರುವ 21 ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, 54 ಸಿಕ್ಸ್‌ಗಳನ್ನ ಬಾರಿಸಿದ್ದಾರೆ.
ಇದಕ್ಕೂ ಮುನ್ನ ಸೌತ್ ಆಫ್ರಿಕಾದ ಸ್ಟಾರ್ ಬ್ಯಾಟರ್ ಎಬಿ ಡಿವಿಲಿಯರ್ಸ್ 2015ರ ಒಂದೇ ವರ್ಷದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 58 ಸಿಕ್ಸ್ ಬಾರಿಸಿದ್ದರು. ಇದಾದ ನಂತರದಲ್ಲಿ ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟರ್ ಕ್ರಿಸ್ ಗೇಯ್ಲ್ 2019ರಲ್ಲಿ 56 ಸಿಕ್ಸ್‌ಗಳನ್ನ ಬಾರಿಸಿ ಮಿಂಚಿದ್ದರು. ಇದೀಗ ಪ್ರಸಕ್ತ ವರ್ಷ 54 ಸಿಕ್ಸ್‌ಗಳನ್ನ ಬಾರಿಸಿ 3ನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ, ಪ್ರಸಕ್ತ ವಿಶ್ವಕಪ್‌ನ ಮುಂಬರುವ ಪಂದ್ಯಗಳಲ್ಲಿ ಇನ್ನಷ್ಟು ಸಿಕ್ಸರ್‌ಗಳನ್ನ ಸಿಡಿಸಿ ಡಿವಿಲಿಯರ್ಸ್ ಹಾಗೂ ಗೇಯ್ಲ್ ಅವರ ದಾಖಲೆ ಮುರಿಯುವ ನಿರೀಕ್ಷೆ ಮೂಡಿಸಿದ್ದಾರೆ.
ಪ್ರಸಕ್ತ ವಿಶ್ವಕಪ್‌ನಲ್ಲಿ ತಮ್ಮ ಬ್ಯಾಟಿಂಗ್ ಶೈಲಿಯನ್ನೇ ಬದಲಿಸಿಕೊಂಡು ಆಡುತ್ತಿರುವ ರೋಹಿತ್, ಇನ್ನಿಂಗ್ಸ್‌ನ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಆಡಿರುವ 5 ಪಂದ್ಯಗಳಲ್ಲಿ 311 ರನ್‌ಗಳಿಸುವ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಹೆಚ್ಚು ರನ್‌ಗಳಿಸಿರುವ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
IND v NZ, Team India, Rohit Sharma, World Cup, ODI Cricket