ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನ ಹೈವೋಲ್ಟೇಜ್ ಫೈಟ್‌ನಲ್ಲಿ ನ್ಯೂಜಿ಼ಲೆಂಡ್ ತಂಡದ ಸವಾಲು ಎದುರಿಸಲು ಭಾರತ ತಂಡ ಸಜ್ಜಾಗಿದ್ದು, ಈ ನಡುವೆ ಅಭ್ಯಾಸದ ವೇಳೆ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಗಾಯದ ಸಮಸ್ಯೆಗೆ ತುತ್ತಾಗಿರುವ ಆತಂಕ ಎದುರಾಗಿದೆ.
ಭಾರತ ಹಾಗೂ ನ್ಯೂಜಿ಼ಲೆಂಡ್ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದ್ದು, ಇದಕ್ಕಾಗಿ ಭಾರತೀಯ ಆಟಗಾರರು ಕಠಿಣ ಅಭ್ಯಾಸ ನಡೆಸಿದ್ದಾರೆ. ಈ ನಡುವೆ ಕಳೆದ ನಾಲ್ಕು ಪಂದ್ಯಗಳಿಂದ ಬೆಂಚ್ ಕಾದಿದ್ದ ಸೂರ್ಯಕುಮಾರ್ ಸಹ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯೊಂದಿಗೆ ಅಭ್ಯಾಸದಲ್ಲಿ ತೊಡಗಿದ್ದ ಸೂರ್ಯಕುಮಾರ್ ಅವರ ಬಲಗೈಗೆ ಪೆಟ್ಟು ಬಿದ್ದಿರುವ ಅನುಮಾನ ವ್ಯಕ್ತವಾಗಿದೆ. ಕೂಡಲೇ ತಂಡದ ಫಿಸಿಯೋ ಸೂರ್ಯಕುಮಾರ್‌ಗೆ ಸೂಕ್ತ ಚಿಕಿತ್ಸೆ ನೀಡಿದ್ದು, ಇದಾದ ಬಳಿಕ ಸೂರ್ಯಕುಮಾರ್ ನೆಟ್ಸ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ.
ಮತ್ತೊಂದೆಡೆ ಯುವ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸಹ ನೆಟ್ಸ್ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಆದರೆ ಈ ವೇಳೆ ಜೇನು ದಾಳಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಮೈದಾನದಲ್ಲಿ ಜಂಪಿಂಗ್ ಮತ್ತು ರನ್ನಿಂಗ್ ಅಭ್ಯಾಸ ನಡೆಸುತ್ತಿದ್ದ ಇಶಾನ್ ಕಿಶನ್, ಜೇನು ದಾಳಿಯಿಂದ ಉಂಟಾದ ನೋವಿನಿಂದಾಗಿ ನಂತರ ಅಭ್ಯಾಸದಲ್ಲಿ ತೊಡಗಲಿಲ್ಲ. ಈ ಇಬ್ಬರು ಆಟಗಾರರಿಗೆ ಉಂಟಾಗಿರುವ ಗಾಯದ ಸಮಸ್ಯೆ ಉಲ್ಬಣಿಸುವ ಆತಂಕ ಎದುರಾಗಿದ್ದು, ಕಿವೀಸ್ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಆದರೆ ಕೋಚ್ ರಾಹುಲ್ ದ್ರಾವಿಡ್ ಅವರು ನೀಡಿರುವ ಹೇಳಿಕೆ ಪ್ರಕಾರ, ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬದಲಿಗೆ ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಎನಿಸಿರುವ ಸೂರ್ಯಕುಮಾರ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.
IND v NZ, Team India, New Zealand, Suryakumar Yadav, Ishan Kishan