IND vs AUS : 4ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ: ಭಾರತದ ಮಡಿಲಿಗೆ ಬಾರ್ಡರ್ – ಗವಾಸ್ಕರ್ ಟ್ರೋಫಿ
ಅತಿಥೇಯ ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ನೀರಸ ಡ್ರಾನಲ್ಲಿ ಅಂತ್ಯಗೊಂಡಿದ್ದು, ಇದರೊಂದಿಗೆ ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು 2-1ರ ಅಂತರದಿಂದ ತನ್ನದಾಗಿಸಿಕೊಂಡಿದೆ.
ಅಹ್ಮದಾಬಾದ್‌ನಲ್ಲಿ ನಡೆದ 4ನೇ ಟೆಸ್ಟ್‌ನ ಅಂತಿಮ ದಿನದಂದು ಆಸೀಸ್ ತಂಡ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್(90) ಹಾಗೂ ಮಾರ್ನಸ್ ಲಬುಶೇನ್(63*) ಅವರ ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ 2ನೇ ಇನ್ನಿಂಗ್ಸ್‌ನಲ್ಲಿ 175/2 ರನ್‌ಗಳಿಸುವ ಮೂಲಕ 84 ರನ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ ಪಂದ್ಯದ ಫಲಿತಾಂಶ ಹೊರಬೀಳುವುದಿಲ್ಲ ಎಂಬ ಕಾರಣ ಉಭಯ ತಂಡಗಳ ಕ್ಯಾಪ್ಟನ್‌ಗಳ ಒಪ್ಪಿಗೆ ಪಡೆದು ಪಂದ್ಯವನ್ನ ಡ್ರಾ ಎಂದು ಘೋಷಿಸಲಾಯಿತು.
ವಿಕೆಟ್ ನಷ್ಟವಿಲ್ಲದೆ 3 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ ಆಸೀಸ್ ದಿಟ್ಟ ಪ್ರದರ್ಶನ ನೀಡಿತು. ದಿನದಾಟ ಆರಂಭಿಸಿದ ಮ್ಯಾಥ್ಯೂವ್ ಕೊನೆಮನ್(6) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ನಂತರದಲ್ಲಿ ಜೊತೆಯಾದ ಟ್ರಾವಿಸ್ ಹೆಡ್(80) ಹಾಗೂ ಮಾರ್ನಸ್ ಲಬುಶೇನ್(60*) ಎಚ್ಚರಿಕೆಯ ಆಟವಾಡಿದರು. 2ನೇ ವಿಕೆಟ್‌ಗೆ ಈ ಜೋಡಿ 139 ರನ್‌ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಟ್ರಾವಿಸ್ ಹೆಡ್ ವೈಯಕ್ತಿಕ 90 ರನ್‌ಗಳಿಸಿದ್ದ ವೇಳೆ ಅಕ್ಸರ್ ಪಟೇಲ್‌ಗೆ ವಿಕೆಟ್ ನೀಡಿ ಶತಕ ವಂಚಿತರಾಗಿ ಹೊರ ನಡೆದರು.
ನಂತರ ಜೊತೆಯಾದ ಲಬುಶೇನ್ ಹಾಗೂ ನಾಯಕ ಸ್ಟೀವ್ ಸ್ಮಿತ್(10*) ಸಹ ಯಾವುದೇ ಆಘಾತವಾಗದಂತೆ ನೋಡಿಕೊಂಡರು. ಪರಿಣಾಮ ಆಸೀಸ್ ತಂಡದ ಮೊತ್ತ 78.1 ಓವರ್‌ಗಳಲ್ಲಿ 175/2 ರನ್‌ಗಳಿದ್ದಾಗ ವೇಳೆ ಪಂದ್ಯವನ್ನ ಡ್ರಾ ಮಾಡಲಾಯಿತು. ಭಾರತದ ಪರ ಆರ್. ಅಶ್ವಿನ್ ಹಾಗೂ ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು.
ನಾಲ್ಕು ಪಂದ್ಯಗಳ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ತಂಡದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಅವರುಗಳು ಸರಣಿ ಶ್ರೇಷ್ಠ ಪ್ರಶಸ್ತಿ ಹಂಚಿಕೊಂಡರೆ. ನಾಲ್ಕನೇ ಟೆಸ್ಟ್‌ನಲ್ಲಿ ಅತ್ಯುತ್ತಮ ಶತಕ ದಾಖಲಿಸಿದ ವಿರಾಟ್ ಕೊಹ್ಲಿ ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ : 1ನೇ ಇನ್ನಿಂಗ್ಸ್ 480 ಮತ್ತು 2ನೇ ಇನ್ನಿಂಗ್ಸ್ 175/2
ಭಾರತ: 1ನೇ ಇನ್ನಿಂಗ್ಸ್ 571
ಫಲಿತಾಂಶ: ಪಂದ್ಯ ಡ್ರಾ
IND vs AUS : 4th Test ends in a draw: Border into India’s lap – Gavaskar Trophy