IND VS AUS : 2 – 1 ರಿಂದ ಸರಣಿ ಗೆದ್ದ ಭಾರತ ; ಕೊನೆಯ ಪಂದ್ಯ ಡ್ರಾನಲ್ಲಿ ಅಂತ್ಯ….
ಭಾರತ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. 4 ಪಂದ್ಯಗಳ ಸರಣಿಯಲ್ಲಿ ಭಾರತ 2-1 ರಿಂದ ಗೆದ್ದು ಬೀಗಿದೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಭಾರತ ಸತತ ನಾಲ್ಕನೇ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಕಾಂಗರೂಗಳಿಂದ ಸತತ ನಾಲ್ಕು ಟೆಸ್ಟ್ ಸರಣಿಗಳನ್ನ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲದೇ ಭಾರತ ಸತತ ಆರನೇ ಬಾರಿಗೆ ತವರಿನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಮುತ್ತಿಕ್ಕಿದೆ. ಇದಕ್ಕೂ ಮೊದಲು 2004ರಲ್ಲಿ ತವರಿನಲ್ಲಿ ಟೀಂ ಇಂಡಿಯಾ ಸೋಲನ್ನ ಎದುರಿಸಬೇಕಾಗಿ ಬಂದಿತ್ತು.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನ 175/2 ಕ್ಕೆ ಡಿಕ್ಲೇರ್ ಮಾಡಿಕೊಂಡಿತು. ಯಾವುದೇ ಫಲಿತಾಂಶ ಕಾಣದ ಕಾರಣ ಉಭಯ ನಾಯಕರು ಪರಸ್ಪರ ಒಪ್ಪಿಗೆಯೊಂದಿಗೆ ಒಂದು ಗಂಟೆ ಮುಂಚಿತವಾಗಿ ಪಂದ್ಯಕ್ಕೆ ಅಂತ್ಯ ಹಾಡಿದರು. ಮಾರ್ನಸ್ ಲಬುಶೆನ್ 63 ಮತ್ತು ಸ್ಟೀವ್ ಸ್ಮಿತ್ 10 ರನ್ ಗಳಿಸಿ ಅಜೇಯರಾಗಿ ಮರಳಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 480 ರನ್ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ 571 ರನ್ ಗಳಿಸಿ ಮೊದಲ ಇನ್ನಿಂಗ್ಸ್‌ನಲ್ಲಿ 91 ರನ್‌ಗಳ ಮುನ್ನಡೆ ಸಾಧಿಸಿತ್ತು. ಪಂದ್ಯ ಡ್ರಾ ಆದರೂ ಕೂಡ ಭಾರತ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಪೈನಲ್ ಗೆ ಲಗ್ಗೆ ಇಟ್ಟಿದೆ.
IND VS AUS : India won the series by 2 – 1; The last match ended in a draw….