IND vs AUS : ಭಾರತದ ವಿರುದ್ಧ ಹೆಚ್ಚು ಬಾರಿ 5 ವಿಕೆಟ್ ಪಡೆದು ದಾಖಲೆ ಬರೆದ ಲಯೋನ್
ಆಸ್ಟ್ರೇಲಿಯಾ ತಂಡದ ಅನುಭವಿ ಆಫ್ ಸ್ಪಿನ್ನರ್ ನೇಥನ್ ಲಯೋನ್ ತಮ್ಮ ಪರಿಣಾಮಕಾರಿ ಬೌಲಿಂಗ್ ಮೂಲಕ 3ನೇ ಟೆಸ್ಟ್‌ನಲ್ಲಿ ಅತಿಥೇಯ ಭಾರತ ತಂಡವನ್ನ ಸೋಲಿನ ಸುಳಿಗೆ ಸಿಲುಕಿಸಿದ್ದಾರೆ.
ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ನೀರಸ ಬೌಲಿಂಗ್ ಪ್ರದರ್ಶನ ನೀಡಿದ್ದ ಲಯೋನ್, ಇಂಧೋರ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಬಲಿಷ್ಠ ಕಮ್‌ಬ್ಯಾಕ್ ಮಾಡಿದರು.
2ನೇ ಇನ್ನಿಂಗ್ಸ್‌ನಲ್ಲಿ 64 ರನ್‌ಗಳಿಗೆ ಪ್ರಮುಖ 8 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಈ ಪ್ರದರ್ಶನದೊಂದಿಗೆ ಲಯೋನ್, ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಹೆಚ್ಚು ಬಾರಿ 5 ವಿಕೆಟ್‌ಗಳನ್ನ ಪಡೆದ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.
35ರ ಹರೆಯದ ಲಯೋನ್ ಅವರು 9ನೇ ಬಾರಿಗೆ ಭಾರತದ ವಿರುದ್ಧ 5 ವಿಕೆಟ್‌ಗಳನ್ನ ಪಡೆದಿದ್ದು, ಆ ಮೂಲಕ ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್(8 ಬಾರಿ) ದಾಖಲೆ ಹಿಂದಿಕ್ಕಿದರು. ಅಲ್ಲದೇ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಹೆಚ್ಚು ವಿಕೆಟ್ ಪಡೆಯುವ ಮೂಲಕ ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ದಾಖಲೆ ಸಹ ಬ್ರೇಕ್ ಮಾಡಿದರು.
ಅಲ್ಲದೇ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದಿದ್ದ ಲಯೋನ್, 2ನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಪಡೆಯುವುದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ 10 ವಿಕೆಟ್‌ಗಳನ್ನ ಪಡೆದುಕೊಂಡರು. ಆಸ್ಟ್ರೇಲಿಯಾ ಪರ ಈವರೆಗೂ 118 ಟೆಸ್ಟ್‌ಗಳನ್ನ ಆಡಿರುವ ಲಯೋನ್, 479 ವಿಕೆಟ್‌ಗಳನ್ನ ಪಡೆದಿದ್ದಾರೆ.
IND vs AUS : Lyon has written the record of taking 5 wickets most times against India