IND vs AUS : 3ನೇ ಟೆಸ್ಟ್‌ಗೆ ಪ್ಯಾಟ್ ಕಮ್ಮಿನ್ಸ್ ಅಲಭ್ಯ: ಸ್ಟೀವ್ ಸ್ಮಿತ್ ಹೆಗಲಿಗೆ ಕ್ಯಾಪ್ಟನ್ ಜವಾಬ್ದಾರಿ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಆರಂಭಕ್ಕೆ ಕೆಲವೇ ದಿನಗಳು ಬಾಯಿ ಇರುವ ಬೆನ್ನಲ್ಲೇ, ಪ್ರವಾಸಿ ಆಸ್ಟ್ರೇಲಿಯಾಕ್ಕೆ ಆಘಾತ ಎದುರಾಗಿದ್ದು, ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮೂರನೇ ಟೆಸ್ಟ್‌ನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ಮಾರ್ಚ್ 1ರಿಂದ 5ರವರೆಗೆ ಇಂಧೋರ್‌ನಲ್ಲಿ ನಡೆಯಲಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಹೊಂದಿದ್ದರೆ, ಆಸ್ಟ್ರೇಲಿಯಾ ತಂಡ ಬಲಿಷ್ಠ ಕಮ್‌ಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದೆ.
ಈ ನಡುವೆ ಆಸೀಸ್ ತಂಡದ ನಾಯಕ ಕಮ್ಮಿನ್ಸ್ ಇಂಧೋರ್‌ನಲ್ಲಿ ನಡೆಯುವ ಮೂರನೇ ಟೆಸ್ಟ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. 2ನೇ ಟೆಸ್ಟ್ ಬಳಿಕ ಕೌಟುಂಬಿಕ ಕಾರಣದಿಂದಾಗಿ ಪ್ಯಾಟ್ ಕಮ್ಮಿನ್ಸ್, ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಆದರೆ 3ನೇ ಟೆಸ್ಟ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತಕ್ಕೆ ವಾಪಸ್ಸಾಗಲು ಕಮ್ಮಿನ್ಸ್ ಹಿಂದೇಟು ಹಾಕಿದ್ದಾರೆ.
ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಅನುಭವಿ ಆಟಗಾರ ಸ್ಟೀವ್ ಸ್ಮಿತ್, ಭಾರತ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಆಸೀಸ್ ತಂಡವನ್ನ ಮುನ್ನಡೆಸಲಿದ್ದಾರೆ. ಸ್ಟೀವ್ ಸ್ಮಿತ್ 2014ರಿಂದ 2018ರವರೆಗೆ ಒಟ್ಟು 34 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಅಲ್ಲದೇ ಕಮ್ಮಿನ್ಸ್ ಸಹ 4ನೇ ಟೆಸ್ಟ್ ವೇಳೆಗೆ ಭಾರತಕ್ಕೆ ವಾಪಾಸ್ಸಾಗುವ ಸಾಧ್ಯತೆ ಇದೆ.
ಆದರೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 2-0 ಅಂತರದ ಹಿನ್ನಡೆ ಅನುಭವಿಸಿರುವ ಆಸೀಸ್‌ಗೆ ಪ್ಯಾಟ್ ಕಮ್ಮಿನ್ಸ್, ಅನುಪಸ್ಥಿತಿ ದೊಡ್ಡ ಪೆಟ್ಟು ನೀಡಿದೆ. ಕಮ್ಮಿನ್ಸ್ ಮಾತ್ರವಲ್ಲದೇ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್ ಹಾಗೂ ಕೆಮರೂನ್ ಗ್ರೀನ್ ಅನುಪಸ್ಥಿತಿ ಆಸೀಸ್ ತಂಡಕ್ಕೆ ಭಾರೀ ಹಿನ್ನಡೆ ಮೂಡಿಸಿದೆ.
IND vs AUS , pat cummins is not gonna be part of rest of test matches