IND vs AUS : ರಾಹುಲ್-ಜಡೇಜಾ ಜುಗಲ್‌ಬಂದಿ : ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ
ಕೆ.ಎಲ್. ರಾಹುಲ್(75*) ಜವಾಬ್ದಾರಿಯ ಬ್ಯಾಟಿಂಗ್ ಹಾಗೂ ರವೀಂದ್ರ ಜಡೇಜಾ(45*) ಆಲ್ರೌಂಡ್ ಪ್ರದರ್ಶನದಿಂದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಗೆಲುವು ಸಾಧಿಸಿತು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಿಚೆಲ್ ಮಾರ್ಷ್(81) ಅವರ ಭರ್ಜರಿ ಬ್ಯಾಟಿಂಗ್ ನಡುವೆಯೂ 35.4 ಓವರ್‌ಗಳಲ್ಲಿ 188ಕ್ಕೆ ಆಲೌಟ್ ಆಯಿತು.
ಈ ಟಾರ್ಗೆಟ್ ಚೇಸ್ ಮಾಡಿದ ಭಾರತ 39.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್‌ಗಳಿಸಿ ಗೆಲುವಿನ ನಗೆಬೀರಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.
ಶಮಿ-ಸಿರಾಜ್ ದಾಳಿ
ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸೀಸ್, ಭಾರತದ ವೇಗಿಗಳಾದ ಶಮಿ(3/17) ಹಾಗೂ ಸಿರಾಜ್(3/29) ದಾಳಿಗೆ ತತ್ತರಿಸಿತು.
ಪರಿಣಾಮ ಆರಂಭಿಕ ಬ್ಯಾಟರ್ ಮಿಚಲ್ ಮಾರ್ಷ್(81) ಭರ್ಜರಿ ಪ್ರದರ್ಶನದ ನಡುವೆಯೂ ಪ್ರಮುಖ ಆಟಗಾರರ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು.
ಆಸೀಸ್ ಪರ ಹೆಡ್(5) ಲಬುಶೇನ್(15), ಜೋಶ್ ಇಂಗ್ಲಿಸ್(26), ಗ್ರೀನ್(12), ಮ್ಯಾಕ್ಸ್‌ವೆಲ್(8), ಸ್ಟಾಯ್ನಿಸ್(5), ಅಬೋಟ್(0), ಸ್ಟಾರ್ಕ್(4*) ಹಾಗೂ ಜ್ಹಂಪ(0) ತಂಡಕ್ಕೆ ಆಸರೆಯಾಗಲಿಲ್ಲ.
ಭಾರತದ ಪರ ಶಮಿ ಹಾಗೂ ಸಿರಾಜ್ ಅವರೊಂದಿಗೆ ಜಡೇಜಾ 2, ಹಾರ್ದಿಕ್ ಮತ್ತು ಕುಲ್ದೀಪ್ ತಲಾ 1 ವಿಕೆಟ್ ಪಡೆದರು.
ಭಾರತಕ್ಕೆ ಬ್ಯಾಟಿಂಗ್ ವೈಫಲ್ಯ
ಆಸ್ಟ್ರೇಲಿಯಾ ನೀಡಿದ 189 ರನ್‌ಗಳ ಸಾಧಾರಣ ಟಾರ್ಗೆಟ್ ಬೆನ್ನತ್ತಿದ ಭಾರತ ಸಹ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಆರಂಭಿಕನಾಗಿ ಬಂದ ಇಶಾನ್ ಕಿಶನ್(3) ಬಹುಬೇಗನೆ ಹೊರ ನಡೆದರೆ.
ನಂತರ ಕಣಕ್ಕಿಳಿದ ವಿರಾಟ್ ಕೊಹ್ಲಿ(4) ಹಾಗೂ ಸೂರ್ಯಕುಮಾರ್(0) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರು. ಇವರ ಬೆನ್ನಲ್ಲೇ ಉತ್ತಮವಾಗಿ ಆಡುವ ಭರವಸೆ ಮೂಡಿಸಿದ್ದ ಶುಭ್ಮನ್ ಗಿಲ್(20) ಸಹ ಔಟಾದರು. ಪರಿಣಾಮ 39 ರನ್‌ಗಳಿಗೆ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ರಾಹುಲ್-ಜಡೇಜಾ ಆಸರೆ
ನಂತರದಲ್ಲಿ ಬಂದ ನಾಯಕ ಹಾರ್ದಿಕ್ ಪಾಂಡ್ಯ(25) ಎಚ್ಚರಿಕೆ ಆಟದ ಮೂಲಕ ತಂಡಕ್ಕೆ ನೆರವಾದರು. ರಾಹುಲ್ ಜೊತೆಗೂಡಿ 5ನೇ ವಿಕೆಟ್‌ಗೆ 44 ರನ್‌ಗಳಿಸಿ ಚೇತರಿಕೆ ನೀಡಿದರು. ನಾಯಕನ ವಿಕೆಟ್ ಪತನದ ಬಳಿಕ ಜೊತೆಯಾದ ಕೆಎಲ್ ರಾಹುಲ್(75* ರನ್, 91 ಬಾಲ್, 7 ಬೌಂಡರಿ, 1 ಸಿಕ್ಸ್) ಹಾಗೂ ರವೀಂದ್ರ ಜಡೇಜಾ (45* ರನ್, 69 ಬಾಲ್, 5 ಬೌಂಡರಿ) 6ನೇ ವಿಕೆಟ್‌ಗೆ 108 ರನ್‌ಗಳ ಅಜೇಯ ಜೊತೆಯಾಟದಿಂದ ತಂಡವನ್ನ ಗೆಲುವಿನ ದಡಸೇರಿಸಿದರು. ಆಸೀಸ್ ಪರ ಸ್ಟಾರ್ಕ್ 3, ಸ್ಟಾಯ್ನಿಸ್ 2 ವಿಕೆಟ್ ಪಡೆದುಕೊಂಡರು.
ಆಲ್ರೌಂಡ್ ಪ್ರದರ್ಶನದಿಂದ ತಂಡದ ಗೆಲುವಿಗೆ ಕಾರಣವಾದ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ಮಾ.19ರಂದು ವಿಶಾಖಪಟ್ಟಣಂನಲ್ಲಿ ನಡೆಯಲಿದೆ.
IND vs AUS : Rahul-Jadeja Jugalbandi : India win by 5 wickets