ind vs eng 2nd | ಅತ್ಯಂತ ಹೀನಾಯವಾಗಿ ಸೋತ ಟೀಂ ಇಂಡಿಯಾ : ಫೈನಲ್ ಗೆ ಇಂಗ್ಲೆಂಡ್
ಟಿ 20 ವಿಶ್ವಕಪ್ ನ ಎರಡನೇ ಸೆಮಿ ಫೈನಲ್ ನಲ್ಲಿ ಟೀಂ ಇಂಡಿಯಾದ ವಿರುದ್ಧ ಇಂಗ್ಲೆಂಡ್ ತಂಡ ಭರ್ಜರಿ 10 ವಿಕೆಟ್ ಗಳಿಂದ ಗೆಲುವು ಕಂಡಿದೆ.
ಆ ಮೂಲಕ ಮೆಗಾ ಈವೆಂಟ್ ನ ಅಂತಿಮ ಘಟ್ಟಕ್ಕೆ ಕಾಲಿಡದೇ ರೋಹಿತ್ ಶರ್ಮಾ ಸೇನೆ ವಾಪಸ್ ಆಗಿದೆ.
ಪಂದ್ಯ ಗೆಲ್ಲಲು 169 ರನ್ ಗಳ ಗುರಿಯನ್ನ ಪಡೆದ ಇಂಗ್ಲೆಂಡ್ ತಂಡ ಭಾರತೀಯ ಬೌಲರ್ ಗಳ ಮೇಲೆ ದಂಡಯಾತ್ರೆ ಮಾಡಿತು.
ಇನ್ನಿಂಗ್ಸ್ ನ ಮೊದಲ ಎಸೆತದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಇಂಗ್ಲೆಂಡ್ ತಂಡ ಇನ್ನಿಂಗ್ಸ್ ನ 16 ನೇ ಓವರ್ ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಗೆಲುವಿನ ಕೇಕೆ ಹಾಕಿದೆ.
ಇಂಗ್ಲೆಂಡ್ ತಂಡದ ಪರ ಆರಂಭಿಕ ಬ್ಯಾಟರ್ ಗಳಾದ ಜೋಸ್ ಬಟ್ಲರ್ 80 ರನ್, ಅಲೆಕ್ಸ್ ಹೆಲ್ಸ್ 86 ರನ್ ಗಳಿಸಿ ಅಜೇಯರಾಗುಳಿದರು.
ಇದಕ್ಕೂ ಮೊದಲ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದರು.

ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್ ಐದು ರನ್ ಗಳಿಸಿ ಔಟ್ ಆದರು. ಇದಾದ ಬಳಿಕ ಮಿಂಚುವ ಸೂಚನೆ ನೀಡಿದ್ದ ರೋಹಿತ್ ಶರ್ಮಾ ಆಟ 27 ರನ್ ಗಳಿಗೆ ಅಂತ್ಯವಾಯಿತು.
ಸೂರ್ಯ ಕುಮಾರ್ ಯಾದವ್ ಗೆ ಆಂಗ್ಲರು ಬೇಗ ಖೆಡ್ಡಾ ತೋಡಿದರು. ಸೂರ್ಯ 14 ರನ್ ಗಳಿಸಿ ರಶೀದ್ ಗೆ ವಿಕೆಟ್ ನೀಡಿದರು.
ಈ ಸಂಕಷ್ಟದ ಸ್ಥಿತಿಯಲ್ಲಿ ವಿರಾಟ್ ಕೊಹ್ಲಿ –ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾಗೆ ಆಸರೆಯಾದರು.
ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ನಾಲ್ಕನೇ ಅರ್ಧಶತಕ ಪೂರೈಸಿದರು.
40 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 50 ರನ್ ಗಳಿಸಿ ಔಟ್ ಆದರು. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಗೇರ್ ಚೇಂಜ್ ಮಾಡಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ, ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶ ನೀಡಿದರು. 33 ಎಸೆತಗಳಲ್ಲಿ 63 ರನ್ ಚಚ್ಚಿದರು.