ಮುಂಬೈ ಅಂಗಳದಲ್ಲಿ ಭಾರತಕ್ಕೆ ಭರ್ಜರಿ ಜಯ India saaksha tv
ಮುಂಬೈ : ವಾಂಖೆಡೆ ಅಂಗಳದಲ್ಲಿ ನಡೆದ ಇಂಡೋ-ಕಿವೀಸ್ ನಡುವಿನ 2 ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸೇನೆ ಗೆಲುವಿನ ನಗೆ ಬೀರಿದೆ. ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 372 ರನ್ ಗಳ ಜಯ ಸಾಧಿಸಿದೆ. ಆ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆಲ್ಲುಕೊಂಡಿದೆ.
ಕಾನ್ಪುರ ಟೆಸ್ಟ್ ಪಂದ್ಯ ಡ್ರಾ ಗೊಂಡ ಬಳಿಕ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ಪ್ರವೇಶವಾಯಿತು. ವಿರಾಟ್ ಆಗಮನದಿಂದ ಮುಂಬೈ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಕೆಲ ಬದಲಾವಣೆಗಳು ನಡೆದವು. ಇನ್ನು ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಣಯವನ್ನು ಸಮರ್ಥಿಸಿಕೊಳ್ಳುವಂತೆ ಕನ್ನಡಿಗ ಮಯಾಂಕ್ ಅಗರ್ ವಾಲ್ ಮತ್ತು ಶುಭ್ ಮನ್ ಗಿಲ್ ಉತ್ತಮ ಆರಂಭ ತಂದುಕೊಟ್ಟರು. ಮೊದಲ ಟೆಸ್ಟ್ ಪಂದ್ಯದಲ್ಲಿ ಮಂಕಾಗಿದ್ದ ಮಯಾಂಕ್ ಈ ಪಂದ್ಯದಲ್ಲಿ ಮಿಂಚು ಹರಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ 150 ರನ್ ಗಳಿದರು. ಇನ್ನುಳಿದಂತೆ ಶುಬ್ ಮನ್ ಗಿಲ್ 44 ರನ್, ಅಕ್ಸರ್ ಪಟೇಲ್ 52 ರನ್ ಗಳಿಸಿದರು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 325ಕ್ಕೆ ಆಲೌಟ್ ಆಯಿತು.
ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ಗೆ ಭಾರತದ ಬೌಲರ್ ಗಳು ಶಾಕ್ ಮೇಲೆ ಶಾಕ್ ನೀಡಿದರು. ಪರಿಣಾಮ ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 62 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಅಶ್ವಿನ್ 4, ಸಿರಾಜ್ 3, ಅಕ್ಸರ್ 2 ವಿಕೆಟ್ ಪಡೆದು ಮಿಂಚಿದರು.
ಇನ್ನು ಬೃಹತ್ ಮೊತ್ತದ ಮುನ್ನಡೆಯೊಂದಿಗೆ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಮತ್ತೆ ಮಯಾಂಕ್ ಅದ್ಭುತ ಆರಂಭ ಒದಗಿಸಿದರು. ಚೇತೇಶ್ವರ ಪೂಜಾರಾ ಜೊತೆಗೂಡಿ ಮಯಾಂಕ್ ಶತಕದ ಜೊತೆಯಾಟವಾಡಿದರು. ಇದೇ ವೇಳೆ ಅರ್ಧಶತಕವನ್ನು ಪೂರ್ಣಗೊಳಿಸಿದರು. ಈ ವೇಳೆ 62 ರನ್ ಗಳಿಸಿದ್ದಾಗ ಏಜಾಜ್ ಪಟೇಲ್ ಗೆ ಮಯಾಂಕ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಪೂಜಾರಾ 47ರನ್, ಗಿಲ್ 47 ರನ್, ವಿರಾಟ್ 36ರನ್, ಅಕ್ಸರ್ 41 ರನ್ ಗಳಿಸಿದರು. ಈ ವೇಳೆ ತಂಡದ ಮೊತ್ತ 276 ರನ್ ಗಳಿದ್ದಾಗ ವಿರಾಟ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಆ ಮೂಲಕ ನ್ಯೂಜಿಲೆಂಡ್ ತಂಡಕ್ಕೆ 540 ರನ್ ಗಳ ಬೃಹತ್ ಮೊತ್ತದ ಗುರಿಯನ್ನ ನೀಡಿದರು.
ಈ ಗುರಿಯನ್ನು ಬೆನ್ನಟ್ಟಿದ ಕಿವೀಸ್ ಗೆ ಟೀಂ ಇಂಡಿಯಾದ ಸ್ಪಿನ್ನರ್ಸ್ ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್ ದುಸ್ವಪ್ನವಂತೆ ಕಾಡಿದರು. ಅಶ್ವಿನ್, ಜಯಂತ್ ಸ್ಪಿನ್ ಮೋಡಿ ಅರಿಯದೇ ನ್ಯೂಜಿಲೆಂಡ್ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ ಕಿವೀಸ್ 167 ರನ್ ಗೆ ಆಲೌಟ್ ಆಯಿತು. ಆ ಮೂಲಕ ಟೀಂ ಇಂಡಿಯಾ 372 ರನ್ ಗಳ ಜಯ ಸಾಧಿಸಿ ಸರಣಿಯನ್ನು ಕೈವಶ ಮಾಡಿಕೊಳ್ತು..









