ಅಶ್ವಿನ್ ಸ್ಪಿನ್ ಮೋಡಿ, ಕ್ರೀಸ್ ಕಚ್ಚಿ ಆಡಲಿಲ್ಲ ನ್ಯೂಜಿಲೆಂಡ್ ಜೋಡಿ, ಮುಂಬೈ ಟೆಸ್ಟ್ನಲ್ಲಿ ಟೀಮ್ ಇಂಡಿಯಾದ ಸವಾರಿ ind vs nz saaksha tv
ಮುಂಬೈ ಟೆಸ್ಟ್ನ ಎರಡನೇ ದಿನ ನ್ಯೂಜಿಲೆಂಡ್ ಸ್ಪಿನ್ನರ್ ಅಜಝ್ ಪಟೇಲ್ ಟೀಮ್ ಇಂಡಿಯಾ ಇನ್ನಿಂಗ್ಸ್ನ ಎಲ್ಲಾ 10 ವಿಕೆಟ್ ಕಬಳಿಸಿ ದಾಖಲೆ ಬರೆದರು. ಅಶ್ವಿನ್ ಮತ್ತು ಸಿರಾಜ್ ಬೌಲಿಂಗ್ ದಾಳಿಗೆ ಸಿಲುಕಿ ಕಿವೀಸ್ ಕಂಗಾಲಾಯಿತು. ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದ್ದು ನ್ಯೂಜಿಲೆಂಡ್ಗೆ ಬೃಹತ್ ಟಾರ್ಗೆಟ್ ನೀಡುವ ಗುರಿ ಇಟ್ಟುಕೊಂಡಿದೆ.
2ನೇ ದಿನ ಆಟ ಆರಂಭಿಸಿದ ಟೀಮ್ ಇಂಡಿಯಾ ಅಜಝ್ ಪಟೇಲ್ ಬೌಲಿಂಗ್ ದಾಳಿಗೆ ಕಂಗೆಟ್ಟಿತು. ವೃದ್ಧಿಮಾನ್ ಸಾಹಾ 25 ರನ್ಗಳಿಸಿ ಔಟಾದರೆ, ಅಶ್ವಿನ್ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಶತಕವೀರ ಮಯಾಂಕ್ ಜೊತೆ ಅಕ್ಸರ್ ಪಟೇಲ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 7ನೇ ವಿಕೆಟ್ಗೆ 67 ರನ್ಗಳ ಜೊತೆಯಾಟ ಆಡಿತು. ಅಮೋಘ ಇನ್ನಿಂಗ್ಸ್ ಕಟ್ಟಿದ ಮಯಾಂಕ್ 17 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 150 ರನ್ಗಳಿಸಿ ಅಜಝ್ಗೆ ವಿಕೆಟ್ ಒಪ್ಪಿಸಿದರು.
ಅಕ್ಸರ್ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದರು. ಆದರೆ 53 ರನ್ಗಳಿಸಿದ್ದಾಗ ಅಜಝ್ ಪಟೇಲ್ಗೆ 8ನೇ ಬಲಿಯಾದರು. ಜಯಂತ್ ಯಾದವ್ 12 ರನ್ಗಳಿಸಿ ಔಟಾದರೆ, ಮೊಹಮ್ಮದ್ ಸಿರಾಜ್ ಪಟೇಲ್ ಎಸೆತದಲ್ಲಿ ರಚಿನ್ಗೆ ಕ್ಯಾಚ್ ನೀಡಿದಾಗ ಇತಿಹಾಸ ಸೃಷ್ಟಿಯಾಗಿತ್ತು. ಪಟೇಲ್ ಟೀಮ್ ಇಂಡಿಯಾ ಇನ್ನಿಂಗ್ಸ್ನ ಎಲ್ಲಾ 10 ವಿಕೆಟ್ಗಳನ್ನು ಪಡೆದಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ ಬಳಿಕ ಈ ಸಾಧನೆ ಮಾಡಿದ ಮೊದಲ ಬೌಲರ್ ಆಗಿ ಇತಿಹಾಸದ ಪುಟ ಸೇರಿದರು. ಟೀಮ್ ಇಂಡಿಯಾ 325 ರನ್ಗಳಿಗೆ ಆಲೌಟ್ ಆಗಿತ್ತು.
ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಟೀಮ್ ಇಂಡಿಯಾ ಬೌಲರ್ಗಳ ಮುಂದೆ ರನ್ಗಾಗಿ ತಿಣುಕಾಡಿ ವಿಕೆಟ್ ಒಪ್ಪಿಸಿತು. ಮೊದಲಿಗೆ ಮೊಹಮ್ಮದ್ ಸಿರಾಜ್ ವಿಲ್ ಯಂಗ್ ರನ್ನು ಕೊಹ್ಲಿ ಕೈಗೆ ಕ್ಯಾಚ್ ಕೊಡಿಸಿದರು. ಟಾಮ್ ಲೇಥಂ 10 ರನ್ಗಳಿಸಿದ್ದಾಗ ಶ್ರೇಯಸ್ಗೆ ಕ್ಯಾಚ್ ನೀಡಿದರು. ರಾಸ್ ಟೇಲರ್ 1 ರನ್ಗಳಿಸಿ ಕ್ಲೀನ್ ಬೌಲ್ಡ್ ಆದರು.
ದಾಳಿಗಿಳಿದ ಅಕ್ಸರ್ ಪಟೇಲ್ ಡೆರಿಲ್ ಮಿಚೆಲ್ ವಿಕೆಟ್ ಪಡೆದರೆ, ಅಶ್ವಿನ್ ನಿಕೊಲಸ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ರಚಿನ್ ರವೀಂದ್ರ ಜಯಂತ್ ಯಾದವ್ಗೆ ವಿಕೆಟ್ ಒಪ್ಪಿಸಿದರು. ಟೀ ವಿರಾಮದ ವೇಳೆಗೆ ಕಿವೀಸ್ 6 ವಿಕೆಟ್ ಕಳೆದುಕೊಂಡು ಕೇವಲ 38 ರನ್ಗಳಿಸಿತು.
ಟೀ ಬಳಿಕ ಅಶ್ವಿನ್ ನ್ಯೂಜಿಲೆಂಡ್ ಕೆಳ ಸರದಿಯನ್ನು ಚಿಂದಿ ಉಡಾಯಿಸಿದರು. ಟಾಮ್ ಬ್ಲಂಡಲ್ ಪೂಜಾರಾಗೆ ಕ್ಯಾಚ್ ಕೊಟ್ರೆ, ಟಿಮ್ ಸೌಥಿ ಮತ್ತು ವಿಲಿಯಂ ಸೊಮರ್ ವಿಲ್ಲೆ ಖಾತೆಯನ್ನೇ ತೆರೆಯಲಿಲ್ಲ. 17 ರನ್ಗಳಿಸಿದ್ದ ಕೈಲ್ ಜೇಮಿಸನ್ ಅಕ್ಸರ್ಗೆ ವಿಕೆಟ್ ಒಪ್ಪಿಸಿದರು. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 62 ರನ್ಗಳಿಗೆ ಆಲೌಟ್ ಆಗಿತು. ಅಶ್ವಿನ್ 8 ರನ್ಗೆ 4 ವಿಕೆಟ್ ಪಡೆದರೆ. ಸಿರಾಜ್ 3 ಮತ್ತು ಅಕ್ಸರ್ 2 ವಿಕೆಟ್ ಪಡೆದರು.
256 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಉತ್ತಮ ಆಟ ಆಡಿತು. ಗಾಯಗೊಂಡ ಗಿಲ್ ಬದಲಿಗೆ ಇನ್ನಿಂಗ್ಸ್ ಆರಂಭಿಸಿದ ಪೂಜಾರಾ ಅಜೇಯ 29 ರನ್ಗಳಿಸಿದ್ದರೆ, ಮೊದಲ ಇನ್ನಿಂಗ್ಸ್ ಶತಕವೀರ ಮಯಾಂಕ್ ಅಜೇಯ 38 ರನ್ಗಳಿಸಿದ್ದಾರೆ. ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ 69 ರನ್ಗಳ ಮುನ್ನಡೆಯೊಂದಿಗೆ 325 ರನ್ಗಳ ಲೀಡ್ ಪಡೆದುಕೊಂಡಿದೆ. 3ನೇ ದಿನ ಈ ಮುನ್ನಡೆಯನ್ನು ಮತ್ತಷ್ಟು ಹೆಚ್ಚು ಮಾಡಿಕೊಂಡು ನ್ಯೂಜಿಲೆಂಡ್ಗೆ ಸವಾಲು ಹಾಕುವ ಪ್ಲಾನ್ ಟೀಮ್ ಇಂಡಿಯಾದಲ್ಲಿದೆ.









