IND vs SL Series : T20I ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಸ್ಪೆಷಲ್ ಸೆಂಚ್ಯುರಿ..!!
ಶ್ರೀಲಂಕಾ ವಿರುದ್ದ ನಡೆದ ಮೊದಲ T20I ಪಂದ್ಯದಲ್ಲಿ ಟೀಂ ಇಂಡಿಯಾ ಹೆಸರಿಗೆ ವಿಶೇಷ “ಸೆಂಚುರಿ”ಯೊಂದು ದಾಖಲಾಗಿದೆ.
ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಶುಭ್ಮನ್ ಗಿಲ್, ಭಾರತ ತಂಡದ ಪರ ತಮ್ಮ ಚೊಚ್ಚಲ T20I ಪಂದ್ಯವನ್ನಾಡಿದರು.
ಇದರೊಂದಿಗೆ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಶುಭ್ಮನ್ ಗಿಲ್ ಹೆಸರು ಸದಾ ನೆನಪಿನಲ್ಲಿ ಉಳಿಯುವಂತಾಗಿದೆ. ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದ ಮೂಲಕ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಶುಭ್ಮನ್ ಗಿಲ್, ಟಿ20 ಕ್ರಿಕೆಟ್ನಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ 100ನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
ಶುಭ್ಮನ್ ಗಿಲ್ ಅವರೊಂದಿಗೆ 2023ರ ಐಪಿಎಲ್ನಲ್ಲಿ ಗರಿಷ್ಠ ಮೊತ್ತಕ್ಕೆ ಬಿಡ್ ಆದ ಅನ್ಕ್ಯಾಪ್ಡ್ ಪ್ಲೇಯರ್ ಎನಿಸಿದ್ದ ಶಿವಂ ಮಾವಿ, ಟಿ20 ಕ್ರಿಕೆಟ್ನಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ 101ನೇ ಆಟಗಾರನಾಗಿ ಕಾಣಿಸಿಕೊಂಡರು.
ಇದರೊಂದಿಗೆ ಪುರುಷರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 100 ಆಟಗಾರರನ್ನ ಕಣಕ್ಕಿಳಿಸಿದ 2ನೇ ತಂಡವಾಗಿ ಟೀಂ ಇಂಡಿಯಾ ಗುರುತಿಸಿಕೊಂಡಿದೆ. ಭಾರತಕ್ಕೂ ಮೊದಲ ಆಸ್ಟ್ರೇಲಿಯಾ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100ಕ್ಕೂ ಹೆಚ್ಚು ಆಟಗಾರರನ್ನ ಕಣಕ್ಕಿಳಿಸಿದ ತಂಡವಾಗಿದೆ.
ಈಗಾಗಲೇ ಟೀಂ ಇಂಡಿಯಾದ ಏಕದಿನ ಮತ್ತು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಶುಭ್ಮನ್ ಗಿಲ್, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ನಾಲ್ಕು ವರ್ಷದ ಬಳಿಕ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ತಂಡದ ಪರ ಈಗಾಗಲೇ 15 ಏಕದಿನ ಪಂದ್ಯವನ್ನಾಡಿರುವ ಶುಭ್ಮನ್ ಗಿಲ್ 687 ರನ್ಗಳಿಸಿದ್ದರೆ. 13 ಟೆಸ್ಟ್ ಪಂದ್ಯಗಳ ಮೂಲಕ 736 ರನ್ಗಳಿಸಿದ್ದಾರೆ.