ಯುಎಇನಲ್ಲಿ ನಿರಾಸೆ.. ಸಿಡ್ನಿಯಲ್ಲಿ ಮಂದಹಾಸ ಬೀರಿದ ಆಸೀಸ್ ಬ್ಯಾಟ್ಸ್ ಮೆನ್ ಗಳು..!
ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿದೆ. ಆಸ್ಟ್ರೇಲಿಯಾದ 374 ರನ್ ಗಳಿಗೆ ಉತ್ತರವಾಗಿ ವಿರಾಟ್ ಕೊಹ್ಲಿ ಪಡೆ ಗಳಿಸಿದ್ದು 308 ರನ್. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 66 ರನ್ ಗಳಿಂದ ಪರಾಭವಗೊಂಡಿದೆ.
ಅಷ್ಟಕ್ಕೂ ಟೀಮ್ ಇಂಡಿಯಾದ ಸೋಲಿಗೆ ಕಾರಣಗಳು ಏನೇನು ? ವಿರಾಟ್ ಪಡೆ ಎಡವಿದ್ದು ಎಲ್ಲಿ ? ಈ ಪ್ರಶ್ನೆಗಳಿಗೆ ಉತ್ತರನೂ ಅಷ್ಟೇ ಸಿಂಪಲ್. ಆಸ್ಟ್ರೇಲಿಯಾ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿತ್ತು. ಟೀಮ್ ಇಂಡಿಯಾದ ಬೌಲರ್ ಗಳು ದುಬಾರಿಯಾದ್ರು.. ಹಾಗೇ ವಿರಾಟ್ ಪಡೆಯ ಪ್ರಮುಖ ಬ್ಯಾಟ್ಸ್ ಮೆನ್ ಗಳು ಅಬ್ಬರಿಸಲು ವಿಫಲರಾದ್ರು.. ಹೀಗೆ ಹೇಳಬಹುದು.
ಆದ್ರೆ ವಿರಾಟ್ ಕೊಹ್ಲಿಯ ಪ್ರಕಾರ ಟೀಮ್ ಇಂಡಿಯಾ ಆಟಗಾರರ ಬಾಡಿ ಲಾಂಗ್ವೇಜ್ ಸರಿಯಾಗಿ ಇರಲಿಲ್ಲ. 25 ಓವರ್ ಗಳ ನಂತರ ಬೌಲರ್ ಗಳು ತುಂಬಾನೇ ದುಬಾರಿಯಾಗಿಬಿಟ್ಟರು. ಪಂದ್ಯದ ಮೇಲಿನ ಹಿಡಿತವೂ ಕೈತಪ್ಪಿ ಹೋಗಿತ್ತು ಅಂತ ಹೇಳ್ತಾರೆ.
ಆದ್ರೆ ಆಸ್ಟ್ರೇಲಿಯಾ ಆಟಗಾರರು ಪಕ್ಕಾ ಗೇಮ್ ಪ್ಲಾನ್ ಮಾಡಿಕೊಂಡು ಅಂಗಣಕ್ಕೆ ಇಳಿದಿದ್ದರು. ವಿರಾಟ್ ಪಡೆಯ ವೇಗಿಗಳು ಮತ್ತು ಸ್ಪಿನ್ನರ್ ಗಳು ಟಾರ್ಗೆಟ್ ಮಾಡಿಕೊಂಡ ಆಸೀಸ್ ಬ್ಯಾಟ್ಸ್ ಮೆನ್ ಗಳು ಯಶ ಕೂಡ ಸಾಧಿಸಿದ್ದರು.
ಟೀಮ್ ಇಂಡಿಯಾದ ಪರ ಮಹಮ್ಮದ್ ಶಮಿ 59 ರನ್ ಗೆ ಮೂರು ವಿಕೆಟ್ ಕಬಳಿಸಿದ್ದರು. ಇದನ್ನು ಹೊರತುಪಡಿಸಿ ಬೂಮ್ರಾ 73 ರನ್ ನೀಡಿದ್ರೆ, ನವದೀಪ್ ಸೈನಿ 83 ರನ್, ಯುಜುವೇಂದ್ರ ಚಾಹಲ್ 89 ರನ್ ಹಾಗೂ ರವೀಂದ್ರ ಜಡೇಜಾ 63 ರನ್ ನೀಡಿದ್ದರು.
ಅಂದ ಹಾಗೇ, ಟೀಮ್ ಇಂಡಿಯಾದ ಬೌಲರ್ ಗಳ ಬೆವರಳಿಸಿದ್ದು ಆಸೀಸ್‍ನ ಸ್ಟಾರ್ ಬ್ಯಾಟ್ಸ್ ಮೆನ್ ಗಳು. ನಾಯಕ ಆರೋನ್ ಫಿಂಚ್, ಸ್ಟೀವನ್ ಸ್ಮಿತ್ ಹಾಗೂ ಗ್ಲೇನ್ ಮ್ಯಾಕ್ಸ್ ವೆಲ್. ಆರಂಭಿಕ ಡೇವಿಡ್ ವಾರ್ನರ್ 69 ರನ್ ಗಳಿಸಿದ್ರು.
ಇದನ್ನು ಬಿಟ್ಟು ಐಪಿಎಲ್ ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಆರೋನ್ ಫಿಂಚ್ ಆಕರ್ಷಕ 114 ರನ್ ಗಳಿಸಿದ್ದರು. ಐಪಿಎಲ್ ನಲ್ಲಿ ಆರ್ ಸಿಬಿ ಪರ ಆಡಿದ್ದ ಆರೋನ್ ಫಿಂಚ್ ಅವರ ಬ್ಯಾಟ್ ನಿಂದ ರನ್ ಗಳು ಹರಿದು ಬರಲಿಲ್ಲ. ಆದ್ರೆ ಸಿಡ್ನಿಯಲ್ಲಿ ಆರೋನ್ ಫಿಂಚ್ ತಾಳ್ಮೆಯ ಆಟವನ್ನಾಡಿ ತನ್ನ 17ನೇ ಶತಕದ ಸಂಭ್ರಮದಲ್ಲೂ ತೇಲಾಡಿದ್ರು.
ಇನ್ನು ಸ್ಟೀವನ್ ಸ್ಮಿತ್.. ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ನಾಯಕ. ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದ ಸ್ಟೀವನ್ ಸ್ಮಿತ್ ಸಿಡ್ನಿ ಅಂಗಣದಲ್ಲಿ ಟೀಮ್ ಇಂಡಿಯಾ ಬೌಲರ್ ಗಳಿಗೆ ಮಾರಕವಾಗಿ ಕಾಡಿದ್ರು. ಕೇವಲ 66 ಎಸೆತಗಳಲ್ಲಿ 106 ರನ್ ದಾಖಲಿಸಿದ್ದ ಸ್ಟೀವನ್ ಸ್ಮಿತ್ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹಾಗೇ ಗ್ಲೇನ್ ಮ್ಯಾಕ್ಸ್ ವೆಲ್.. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಐಪಿಎಲ್ ನಲ್ಲಿ ಆಡಿದ್ದರು. ಮ್ಯಾಕ್ಸ್‍ವೆಲ್ ತೀರಾ ಕಳಪೆ ಪ್ರದರ್ಶನ ನೀಡಿದ್ದರು. ಆದ್ರೆ ಟೀಮ್ ಇಂಡಿಯಾ ವಿರುದ್ಧ ಮ್ಯಾಕ್ಸ್ ವೆಲ್ ಸವಾರಿ ನಡೆಸಿದ್ರು. ಕೇವಲ 19 ಎಸೆತಗಳಲ್ಲಿ 45 ರನ್ ಕೂಡ ಸಿಡಿಸಿದ್ದರು.
ಹೀಗೆ ಐಪಿಎಲ್ ನಲ್ಲಿ ಫ್ಲಾಫ್ ಆಗಿದ್ದ ಆರೋನ್ ಫಿಂಚ್, ಸ್ಟೀವನ್ ಸ್ಮಿತ್ ಮತ್ತು ಮ್ಯಾಕ್ಸ್ ವೆಲ್ ಟೀಮ್ ಇಂಡಿಯಾದ ವಿರುದ್ಧ ಪ್ರಹಾರ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಆಸ್ಟ್ರೇಲಿಯಾದ 374 ರನ್ ಗಳಿಗೆ ಉತ್ತರವಾಗಿ ಟೀಮ್ ಇಂಡಿಯಾ ದಿಟ್ಟ ಉತ್ತರ ನೀಡಿದ್ರೂ ಪ್ರಮುಖ ಬ್ಯಾಟ್ಸ್ ಮೆನ್ ಗಳು ವೈಫಲ್ಯ ಅನುಭವಿಸಿದ್ದರು.
ಮಯಾಂಕ್ 22 ರನ್ ಗೆ ಸೀಮಿತವಾದ್ರೆ, ಶಿಖರ್ ಧವನ್ 74 ರನ್ ಗಳಿಸಿದ್ರು. ಇನ್ನುಳಿದಂತೆ ವಿರಾಟ್ ಕೊಹ್ಲಿ 21 ರನ್, ಶ್ರೇಯಸ್ ಅಯ್ಯರ್ 2 ರನ್ ಹಾಗೂ ಕೆ.ಎಲ್. ರಾಹುಲ್ 12 ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 76 ಎಸೆತಗಳಲ್ಲಿ 90 ರನ್ ಸಿಡಿಸಿ ತನ್ನ ಫಾರ್ಮ್ ಅನ್ನು ಮುಂದುರಿಸಿದ್ದಾರೆ.
ಒಟ್ಟಿನಲ್ಲಿ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಸೋತಿದೆ. ಇದೀಗ ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯಕ್ಕೆ ತಯಾರಾಗಬೇಕಿದೆ. ಅಲ್ಲದೆ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.