ಟೀಮ್ ಇಂಡಿಯಾ ವೇಗಿಗಳ ಮೇಲಾಟ.. ತವರು ನೆಲದಲ್ಲೇ ರನ್ ಗಳಿಸಲು ಇಂಗ್ಲೆಂಡ್ ಪರದಾಟ..!
1, 2, 3, 4, ಇದು ಟೀಮ್ ಇಂಡಿಯಾದ ನಾಲ್ವರು ವೇಗಿಗಳು ಪಡೆದಿರುವ ವಿಕೆಟ್ ಗಳ ಸಂಖ್ಯೆ.. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಟೀಮ್ ಇಂಡಿಯಾದ ವೇಗದ ಬೌಲರ್ ಗಳ ಉರಿ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳು ತತ್ತರಿಸಿ ಹೋದ್ರು. ಪರಿಣಾಮ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ ಕೇವಲ 183 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಮೊದಲ ದಿನದ ಅಂತ್ಯದ ವೇಳೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ರೋಹಿತ್ ಶರ್ಮಾ ಅಜೇಯ 9 ಮತ್ತು ಕೆ. ಎಲ್. ರಾಹುಲ್ ಅಜೇಯ 9 ರನ್ ಗಳನ್ನು ದಾಖಲಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನ್ಯಾಟಿಂಗ್ ಹ್ಯಾಮ್ ನಲ್ಲಿ ಟಾಸ್ ಗೆದ್ದುಕೊಂಡ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ಜಸ್ಪ್ರಿತ್ ಬುಮ್ರಾ ಶಾಕ್ ನೀಡಿದ್ರು. ರೋರಿ ಬನ್ರ್ಸ್ ಅವರು ಶೂನ್ಯ ಸುತ್ತಿದ್ರು.
ಬಳಿಕ ಬೂಮ್ರಾ ಜೊತೆ ಟೀಮ್ ಇಂಡಿಯಾದ ವೇಗಿಗಳಾದ ಮಹಮ್ಮದ್ ಶಮಿ, ಮಹಮ್ಮದ್ ಸೀರಾಜ್ ಮತ್ತು ಶಾರ್ದೂಲ್ ಥಾಕೂರ್ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮೆನ್ ಗಳನ್ನು ಪೆವಿಲಿಯನ್ ಪರೇಡ್ ನಡೆಸಿದ್ರು.
ಇಂಗ್ಲೆಂಡ್ ಪರ ನಾಯಕ ಜಾಯ್ ರೂಟ್ ಮಾತ್ರ ತಾಳ್ಮೆಯ 64 ರನ್ ಗಳಿಸಿ ತಂಡಕ್ಕೆ ಕೊಂಚ ಮಟ್ಟಿಗೆ ಆಧಾರವಾಗಿ ನಿಂತ್ರು. ಉಳಿದಂತೆ ಝಾಕ್ ಕ್ರಾವ್ಲೆ 27, ಜೋನಿ ಬೇರ್ ಸ್ಟೋವ್ 29 ಮತ್ತು ಸ್ಯಾಮ್ ಕುರನ್ ಅಜೇಯ 27 ರನ್ ಗಳಿಸಿದ್ರು. ಇಂಗ್ಲೆಂಡ್ ತಂಡದ ನಾಲ್ವರು ಬ್ಯಾಟ್ಸ್ ಮೆನ್ ಗಳು ಶೂನ್ಯಕ್ಕೆ ಔಟಾದ್ರು.
ಟೀಮ್ ಇಂಡಿಯಾದ ಪರ ಜಸ್ಪ್ರಿತ್ ಬೂಮ್ರಾ ನಾಲ್ಕು ವಿಕೆಟ್ ಪಡೆದ್ರೆ, ಮಹಮ್ಮದ್ ಶಮಿ ಮೂರು ವಿಕೆಟ್ ಹಾಗೂ ಶಾರ್ದೂಲ್ ಥಾಕೂರ್ ಎರಡು ವಿಕೆಟ್ ಮತ್ತು ಮಹಮ್ಮದ್ ಸೀರಾಜ್ ಒಂದು ವಿಕೆಟ್ ಉರುಳಿಸಿದ್ರು.