ಇಂದಿನಿಂದ 1 ವರ್ಷದ ಅವಧಿಗೆ ಜಿ-20 ಅಧ್ಯಕ್ಷತೆ ವಹಿಸಿಕೊಂಡ ಭಾರತ…
ವಿಶ್ವದ ದಕ್ಷಿಣ ರಾಷ್ಟ್ರಗಳ ಇಂಧನ, ಆಹಾರ ಮತ್ತು ರಸಗೊಬ್ಬರದ ಕಾಳಜಿಯನ್ನು ವ್ಯಕ್ತಪಡಿಸುವ ಧ್ವನಿ ಭಾರತ ಆಗಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಇಂದು ಭಾರತ ಜಿ-20 ಅಧ್ಯಕ್ಷತೆಯನ್ನು ವಿಧ್ಯುಕ್ತವಾಗಿ ವಹಿಸಿಕೊಂಡ ದಿನದಂದು ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹೆಚ್ಚು ಪ್ರಮುಖ ವಿಷಯಗಳಿಂದಾಗಿ ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಕ್ರಮ ಹಾಗೂ ಹವಾಮಾನ ನ್ಯಾಯ ವಿಚಾರವನ್ನು ಬದಿಗೊತ್ತಲಾಗುತ್ತಿದೆ ಎಂಬ ಆತಂಕವನ್ನು ಭಾರತ ಹಂಚಿಕೊಳ್ಳಲು ಬಯಸುತ್ತದೆ ಎಂದರು.
ಭಾರತ, ಇಂದಿನಿಂದ 2023 ನವೆಂಬರ್ 30ರವರೆಗಿನ 1 ವರ್ಷದ ಅವಧಿಗೆ ಜಿ-20 ಅಧ್ಯಕ್ಷತೆ ವಹಿಸಿಕೊಳ್ಳುತ್ತಿದ್ದು, ಅದನ್ನು ವಿಭಿನ್ನ ಹಾಗೂ ವಿಶಿಷ್ಟವಾಗಿಸಲಿದೆ. ಇದಕ್ಕೆ ಇಂದು ನಡೆಯುತ್ತಿರುವ ಕಾರ್ಯಕ್ರಮಗಳೇ ಸಾಕ್ಷಿ ಎಂದರು.
ಜಿ -20 ಪ್ರಮುಖ ಆರ್ಥಿಕ ರಾಷ್ಟ್ರಗಳನ್ನು ಒಂದು ವೇದಿಕೆಗೆ ತರುತ್ತದೆ. ಇದು ಜಾಗತಿಕ ಒಟ್ಟು ದೇಶೀಯ ಉತ್ಪನ್ನದ ಶೇಕಡಾ 85ರಷ್ಟನ್ನು ಪ್ರತಿನಿಧಿಸುತ್ತದೆ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರದ ಶೇಕಡಾ 75ರಷ್ಟು ಪಾಲು ಹೊಂದಿದೆ ಮತ್ತು ವಿಶ್ವದ ಮೂರನೇ ಎರಡರಷ್ಟು ಜನಸಂಖ್ಯೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.
ವಿಶ್ವಸಂಸ್ಥೆ , ವಿಶ್ವ ವಾಣಿಜ್ಯ ಸಂಘಟನೆ, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಬ್ಯಾಂಕ್ , ಅಂತಾರಾಷ್ಟ್ರೀಯ ವಿತ್ತ ನಿಧಿ, ಅಂತಾರಾಷ್ಟ್ರೀಯ ಸೌರ ಸಹಯೋಗ , ಆಸಿಯಾನ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಸಂಘಟನೆಗಳೂ ಇದರಲ್ಲಿ ಭಾಗಿಯಾಗುತ್ತವೆ ಎಂದು ತಿಳಿಸಿದರು.
ಭಾರತ, ಅರ್ಜೆಂಟೈನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷಿಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೆಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ ಸೇರಿ 20 ರಾಷ್ಟ್ರಗಳು ಈ ಒಕ್ಕೂಟದಲ್ಲಿ ಸೇರಿವೆ.
India formally assumes G20 Presidency for one year