Global Hunger Index | ಜಾಗತಿಕ ಹಸಿವು ಸೂಚ್ಯಂಕ : ಭಾರತದ ಹಸಿವಿನ ಪರಿಸ್ಥಿತಿ ‘ಗಂಭೀರ’
ನವದೆಹಲಿ : ಜಾಗತಿಕ ಹಸಿವು ಸೂಚ್ಯಂಕದ 2022ರ ಪಟ್ಟಿಯಲ್ಲಿ ಭಾರತದ ಸ್ಥಾನ ಮತ್ತಷ್ಟು ಕುಸಿದಿದೆ.
ಕಳೆದ ವರ್ಷ 101 ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷದ ಪಟ್ಟಿಯಲ್ಲಿ 107 ನೇ ಸ್ಥಾನಕ್ಕೆ ಕುಸಿದಿದೆ.
ಐರಿಶ್ ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಪ್ ಜಂಟಿಯಾಗಿ ಅಧ್ಯಕ್ಷ ನಡೆಸಿದ ಅಧ್ಯಯನ ಇದಾಗಿದ್ದು, ಭಾರತದ ಹಸಿವಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದೆ.
ಒಟ್ಟಾರೆ 121 ದೇಶಗಳಲ್ಲಿ ಅಧ್ಯಯನ ನಡೆಸಲಾಗಿದ್ದು, ನೆರೆಯ ದೇಶಗಳಾದ ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಿಂತಳೂ ಕೆಳಗಿನ ಸ್ಥಾನದಲ್ಲಿ ಭಾರತ ದೇಶವಿದೆ.
ನೇಪಾಳ 81 ನೇ ಸ್ಥಾನದಲ್ಲಿ, ಪಾಕಿಸ್ತಾನ 99ನೇ ಸ್ಥಾನದಲ್ಲಿ, ಶ್ರೀಲಂಕಾ 64 ನೇ ಸ್ಥಾನದಲ್ಲಿ ಮತ್ತು ಬಾಂಗ್ಲಾದೇಶ 84ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಭಾರತಕ್ಕೆ 29.1 ಅಂಕವನ್ನು ನೀಡಲಾಗಿದೆ.

ಈ ಪಟ್ಟಿಯಲ್ಲಿ ಚೀನಾ, ಟರ್ಕಿ, ಕುವೈತ್ ಸೇರಿದಂತೆ ಹದಿನೇಳು ದೇಶಗಳು ಜಿಹೆಚ್ ಐ ಸ್ಕೋರ್ ನಲ್ಲಿ ಐದಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿವೆ.
ಗೋಬಲ್ ಹಂಗರ್ ಇಂಡೆಕ್ಸ್ ಸ್ಕೋರ್ ಅನ್ನು ಕೆಲವು ಸೂಚಕಗಳ ಮೇಲೆ ಅಳೆಯಲಾಗುತ್ತದೆ.
ಮೊದಲನೆಯದಾಗಿ ಅಪೌಷ್ಟಿಕತೆ, ಎರಡನೇಯದಾಗಿ ಮಕ್ಕಳ ಬೆಳವಣಿಗೆ ಕುಂಠಿತ, ಮೂರನೇ ಅಂಶ ಮಕ್ಕಳ ಮರಣ.
ಭಾರತವೂ ಇತ್ತೀಚಿನ ವರ್ಷಗಳಲ್ಲಿ ಜಿ ಹೆಚ್ ಐ ಸ್ಕೋರ್ ಗಳನ್ನು ಕಡಿಮೆ ಮಾಡುತ್ತಾ ಬರುತ್ತಿದ್ದು, 2000 ಇಸವಿಯಲ್ಲಿ ಇದು 38.8 ( ಆತಂಕಕಾರಿ ) ಸ್ಕೋರ್ ಇತ್ತು.








