ಸ್ಥಳೀಯ ಉತ್ಪಾದನೆಗೆ ಈ ಭಾರಿ ಬಜೆಟ್ ನಲ್ಲಿ ಆದ್ಯತೆ – ಪ್ರಧಾನಿ
ಭಾರತ ಕೇವಲ ವಸ್ತುಗಳನ್ನು ಮಾರಾಟ ಮಾಡುವ ಮಾರುಕಟ್ಟೆಯಾಗಿಯಷ್ಟೆ ಇರಲು ಸಾಧ್ಯವಿಲ್ಲ. ವಸ್ತುಗಳ ಸ್ಥಳೀಯವಾಗಿ ಉತ್ಪಾದನೆಗೆ ಈ ಬಾರಿಯ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಬಜೆಟ್ ಸಂಬಂಧಿಸಿದ ಕೈಗಾರಿಕೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಷ್ಟಿ ಸೇರಿ ಹಲವು ವಿಷಯಗಳ ಬಗ್ಗೆ ವೆಬಿನಾರ್ ನಲ್ಲಿ ಪ್ರಧಾನಿ ನರೇಂದ್ರಮೋದಿ ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ ಕಚ್ಚಾವಸ್ತು ರಫ್ತಾಗಿ ಅದೇ ವಸ್ತು ಮರಳಿ ಖರೀದಿಸುವುದರಿಂದ ಯಾವುದೇ ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. ನಮ್ಮ ಬಳಿ ದಕ್ಷ ಯುವಶಕ್ತಿ ಪಡೆ ಇದೆ. ಖಾಸಗಿ, ಕಾರ್ಪೋರೇಟ್ ಸೇರಿದಂತೆ ಎಲ್ಲರನ್ನೊಳಗೊಂಡು ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಸಾಕಾರಗೊಳಿಸಬೇಕಿದೆ.
ನಮ್ಮಲ್ಲಿ ಉತ್ಪಾದನೆಯಾಗುವ ವಸ್ತುಗಳ ಗುಣಮಟ್ಟ ಉತ್ಕೃಷ್ಟವಾಗಿರಬೇಕು. ಆಗ ಖರೀದಿದಾರರು ತನ್ನಷ್ಟಕ್ಕೆ ತಾನೇ ಸ್ವದೇಶಿ ವಸ್ತುಗಳನ್ನು ಖರೀದಿಸುತ್ತಾರೆ. ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ತಿಳಿಸಿದರು.
ಸೆಮಿ ಕಂಡೆಕ್ಟರ್ ವಿಭಾಗದಲ್ಲಿ ಭಾರತ, ಸ್ವಾವಲಂಬನೆ ಸಾಧಿಸುವುದು ಅಗತ್ಯವಾಗಿದ್ದು, ಈ ವಿಭಾಗದ ಕಡೆ ಕೈಗಾರಿಕೋದ್ಯಮಿಗಳು ಗಮನಹರಿಸಬೇಕು. ವೈದ್ಯಕೀಯ ಉಪಕರಣಗಳು, ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದ್ದು, ಈ ಉಪಕರಣಗಳನ್ನು ಸ್ಥಳೀಯವಾಗಿ ಉತ್ಪಾದನೆ ಮಾಡುವ ಕ್ಷಮತೆ ಭಾರತ ಹೊಂದಿದೆ ಎಂದರು.
ನಾವು ಸ್ಪರ್ಧಾತ್ಮಕ ಉತ್ಪನ್ನಗಳನ್ನು ತಯಾರಿಸುವಲ್ಲಿ ಕ್ರಾಂತಿಯನ್ನು ತರಲು ವೊಕಲ್ ಫಾರ್ ಲೋಕಲ್ ಗೆ ಒತ್ತು ನೀಡಬೇಕಾಗಿದೆ. ಇದರಿಂದ ಸ್ಥಳೀಯರು ಸಬಲೀಕರಣಗೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.








