ಪ್ರವಾಸೋದ್ಯಮದ ಜಾಗತಿಕ ಸೂಚ್ಯಂಕದಲ್ಲಿ ಭಾರತ 34ನೇ ಸ್ಥಾನಕ್ಕೆ ಏರಿಕೆ…
ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತ ಇಂದಿನಿಂದ ಆರಂಭವಾಗಿದೆ. ಲೋಕಸಭಾಧ್ಯಕ್ಷ ಓಂ ಬಿರ್ಲಾ, ಸದನದಲ್ಲಿ ಸುಗಮ ಕಲಾಪಕ್ಕೆ ಸದಸ್ಯರು ಸಹಕರಿಸಬೇಕು. ಪ್ರತಿಯೋರ್ವ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳುವ ಮೂಲಕ ಫಲಪ್ರದ ಚರ್ಚೆಗೆ ಆಸ್ಪದ ನೀಡಬೇಕು ಎಂದರು. ಪ್ರಶ್ನೋತ್ತರ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ, ಮಾತನಾಡಿ ಕೋವಿಡ್ ಬಳಿಕ ದೇಶದಲ್ಲೀಗ ಪ್ರವಾಸೋದ್ಯಮ ವಲಯದಲ್ಲಿ ಚೇತರಿಕೆ ಕಂಡುಬಂದಿದ್ದು, ಕಳೆದ ಎರಡು ವರ್ಷಗಳಿಂದ 1 ಲಕ್ಷ 57 ಸಾವಿರಕ್ಕೂ ಅಧಿಕ ಇ-ವೀಸಾ ನೀಡಲಾಗಿದೆ. ದೇಶದಲ್ಲಿ ಸಾಂಸ್ಕೃತಿಕ, ಧಾರ್ಮಿಕ, ವೈದ್ಯಕೀಯ, ಪರಿಸರ ಮುಂತಾದ ಪ್ರವಾಸೋದ್ಯಮಕ್ಕೆ ಅವಕಾಶವಿದೆ. ಪ್ರವಾಸೋದ್ಯಮದ ಜಾಗತಿಕ ಸೂಚ್ಯಂಕದಲ್ಲಿ ಭಾರತ 34ನೇ ಸ್ಥಾನಕ್ಕೆ ಏರಿದೆ. 2014ರಲ್ಲಿ ಭಾರತ 52ನೇ ಸ್ಥಾನದಲ್ಲಿತ್ತು ಎಂದು ಹೇಳಿದರು. ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ದೇಶೀಯ ಉಡಾನ್ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 5 ಲಕ್ಷ ಉಚಿತ ವೀಸಾ ನೀಡುವ ಗುರಿ ಹೊಂದಲಾಗಿದೆ ಎಂದರು.
ಮೊದಲ ಲಾಕ್ ಡೌನ್ ಅವಧಿಯಲ್ಲಿ ಪ್ರವಾಸೋದ್ಯಮದ ಮೇಲೆ ಶೇ.8ರಷ್ಟು , ಎರಡನೇ ಲಾಕ್ ಡೌನ್ ನಲ್ಲಿ ಶೇ.51ರಷ್ಟು, ಮೂರನೇ ಅವಧಿಯಲ್ಲಿ ಶೇ.64ರಷ್ಟು ಪರಿಣಾಮವುಂಟಾಗಿತ್ತು. ಒಟ್ಟಾರೆ, ಶೇ.90ರಷ್ಟು ಆದಾಯ ಕುಸಿತವಾಗಿತ್ತು ಎಂದು ಸಚಿವರು ತಿಳಿಸಿದರು. ಲಾಕ್ ಡೌನ್ ಪರಿಣಾಮವಾಗಿ, ಪ್ರವಾಸೋದ್ಯಮ ವಲಯದಲ್ಲಿ ಕೋಟಿಗೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಇದೀಗ ಈ ಕ್ಷೇತ್ರದ ಉತ್ತೇಜನಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದು ರಾಜ್ಯಗಳಿಗೆ ಸಂಬಂಧಿಸಿರುವ ವಿಷಯವಾಗಿರುವುದರಿಂದ ರಾಜ್ಯಗಳು ಪ್ರವಾಸೋದ್ಯಮಕ್ಕೆ ಕೈಗಾರಿಕೆಯ ಮಾನ್ಯತೆ ನೀಡಬೇಕು ಎಂದು ಮನವಿ ಮಾಡಿದರು.