ಚಾಂಪಿಯನ್ಸ್ ಟ್ರೋಫಿ ಫೆ. 19 ರಿಂದ ಮಾರ್ಚ್ 9ರ ವರೆಗೆ ನಡೆಯಲಿದ್ದು, ಪಾಕ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಭಾರತ ಪಾಕಿಸ್ತಾನ್ ಕ್ಕೆ ಭದ್ರತೆಯ ದೃಷ್ಟಿಯಿಂದ ಹೋಗುವುದಿಲ್ಲ ಎಂದು ಹೇಳಿದೆ. ಈ ಮಧ್ಯೆ ಪಾಕ್ ಕೂಡ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಕೆಲವು ನಿರ್ಧಾರಗಳನ್ನು ಪಟ್ಟು ಹಿಡಿಯುತ್ತಿದೆ. ಇದು ಪಾಕಿಸ್ತಾನ್ ಕ್ಕೆ ತೊಂದರೆಯಾಗಬಹುದು ಎನ್ನಲಾಗುತ್ತಿದೆ.
ಹೀಗಾಗಿ ಇಡೀ ಪಂದ್ಯಾವಳಿಯೇ ಬೇರೆ ದೇಶಕ್ಕೆ ಸ್ಥಳಾಂತರವಾಗುವ ಸಾಧ್ಯತೆ ಇದೆ. ಬಿಸಿಸಿಐ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಅಧಿಕೃತವಾಗಿ ಪತ್ರ ಬರೆದಿದ್ದು ಭದ್ರತೆಯ ಕಾರಣದಿಂದ ನಾವು ತಂಡವನ್ನು ಕಳಿಸುವುದಿಲ್ಲ ಎಂದು ತಿಳಿಸಿದೆ. ಆದರೆ, ಪಿಸಿಬಿ ಭಾರತ ಬಂದರೂ ಸರಿ, ಇಲ್ಲವಾದರೂ ಸರಿ ನಾವು ಟೂರ್ನಿ ನಡೆಸುತ್ತೇವೆ ಎಂದು ಪಿಸಿಬಿ ಹೇಳಿದೆ. ಆದರೆ, ಐಸಿಸಿಗೆ ಭಾರತ ತಂಡ ಆಡುವುದು ಮುಖ್ಯವಾಗಿದೆ. ಇಲ್ಲವಾದರೆ, ಐಸಿಸಿಗೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೈಬ್ರಿಡ್ ಮಾದರಿಯ ಟೂರ್ನಿ ಆಯೋಜಿಸುವಂತೆ ಐಸಿಸಿ ಹೇಳಬಹುದು ಎನ್ನಲಾಗುತ್ತಿದೆ.
ಏಷ್ಯಾ ಕಪ್ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜನೆ ಮಾಡಿದ್ದ ಪಾಕಿಸ್ತಾನ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಇಲ್ಲೇ ನಡೆಯಬೇಕು ಎಂದು ಹಠ ಹಿಡಿದು ಕೂತಿದೆ. ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆ ಮಾಡಲು ನಿರಾಕರಿಸಿದರೆ ಇಡೀ ಪಂದ್ಯಾವಳಿಯನ್ನೇ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಬಹುದು ಎನ್ನಲಾಗುತ್ತಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಕೂಡ ತೆರೆ ಮರೆಯ ಹಿಂದೆ ಟೂರ್ನಿ ಆಯೋಜಿಸಲು ಕಸರತ್ತು ನಡೆಸುತ್ತಿದೆ.