INDvsAUS T20: ಸರಣಿ ನಿರ್ಣಾಯಕ ಪಂದ್ಯ – ಆಸಿಸ್ ಗೆ 5 ವರ್ಷಗಳ ನಂತರ ಚಾನ್ಸ್
ನಾಗ್ಪುರ: ಮೂರು ಟಿ-20 ಸರಣಿಯಲ್ಲಿ ಮೊದಲ ಪಂದ್ಯದ ಸೋಲಿನಿಂದಾಗಿ ಕೆಂಗೆಟ್ಟಿರುವ ಭಾರತಕ್ಕೆ ಇಂದು (ಶುಕ್ರವಾರ) ನಾಗ್ಪುರದಲ್ಲಿ ನಡೆಯಲಿರುವ ಎರಡನೇ ಟಿ20ಯಲ್ಲಿ ರೋಹಿತ್ ಪಡೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇಲ್ಲದಿದ್ದರೆ ಸರಣಿ ಕೈ ತಪ್ಪಲಿದೆ.
ಏಷ್ಯಾಕಪ್ ಸೋಲಿನ ಸುಳಿಗೆ ಸಿಲುಕಿರುವ ಭಾರತ ತಂಡ, ಇನ್ನೊಂದು ಪಂದ್ಯದಲ್ಲಿ ಸೋತರೆ ಆಟಗಾರರ ಆತ್ಮವಿಶ್ವಾಸವೇ ಪ್ರಶ್ನೆಯಾಗಲಿದೆ. ಅದಕ್ಕಾಗಿಯೇ ತನ್ನ ಸಂಪೂರ್ಣ ಸಾಮರ್ಥ್ಯವನ್ನ ಭಾರತ ತಂಡ ತೋರಿಸಬೇಕಿದೆ.
ಆದರೆ, ಮೊದಲ ಬಾರಿಗೆ ಆಸೀಸ್ ವಿರುದ್ಧ ಅತ್ಯಧಿಕ ಸ್ಕೋರ್ (208) ದಾಖಲಿಸಿದ್ದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ಭಾರತ ತಂಡದ ಬೌಲಿಂಗ್ ದೌರ್ಬಲ್ಯವನ್ನು ತೋರಿಸಿತ್ತು.
ಕೊನೆಯ ನಾಲ್ಕು ಓವರ್‌ಗಳಲ್ಲಿ ಆಸೀಸ್‌ಗೆ 55 ರನ್‌ಗಳ ಅಗತ್ಯವಿದ್ದಂಥಹ ಪಂದ್ಯವನ್ನ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಬಿಟ್ಟು ಕೊಟ್ಟಿತ್ತು. ಭಾರತ ತಂಡದ ಕಳೆಪೆ ಡೆತ್ ಬೌಲಿಂಗ್ ಮತ್ತೆ ಬಹಿರಂಗವಾಯಿತು. ಮೊದಲು ಈ ವಿಭಾಗದ ದೋಷಗಳನ್ನು ಭಾರತ ಸರಿಪಡಿಸಿಕೊಳ್ಳಬೇಕಾಗಿದೆ. ಮೊದಲ ಪಂದ್ಯ ಗೆದ್ದ ಜೋಶ್‌ನಲ್ಲಿರುವ ಆಸೀಸ್ ತಂಡ ಮತ್ತೊಂದು ಗೆಲುವಿನೊಂದಿಗೆ ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ.
ಅನುಭವಿ ವೇಗಿ ಭುವನೇಶ್ವರ್ ಡೆತ್ ಓವರ್‌ಗಳಲ್ಲಿ ವೈಫಲ್ಯ ಅನುಭವಿಸುತ್ತಿರುವುದು ಪಂದ್ಯದ ಫಲಿತಾಂಶವನ್ನೇ ಬದಲಿಸುತ್ತಿದೆ. ಹರ್ಷಲ್ ಪಟೇಲ್ ಗಾಯದಿಂದ ಚೇತರಿಸಿಕೊಂಡು ತಂಡವನ್ನ ಸೇರಿಕೊಂಡರೂ ಪ್ರಭಾವ ಬೀರಲು ಸಾಧ್ಯವಾಗ್ತಿಲ್ಲ. ಅಕ್ಷರ್ ಪಟೇಲ್ ಹೊರತುಪಡಿಸಿ ಎಲ್ಲರೂ ಪ್ರತಿ ಓವರ್‌ಗೆ ಹತ್ತಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಡುತ್ತಿರುವುದು ಆತಂಕಕಾರಿಯಾಗಿದೆ.
ಗಾಯದಿಂದ ಚೇತರಿಸಿಕೊಂಡ ನಂತರವೂ ಜಸ್ಪ್ರೀತ್ ಬುಮ್ರಾ ಅವರನ್ನು ಮೊದಲ ಪಂದ್ಯದಿಂದ ಹೊರಗಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂದಿನ ಪಂದ್ಯದಲ್ಲಿ ಬುಮ್ರಾ ಆಡಿದರೆ ಉಮೇಶ್ ಯಾದವ್ ಹೊರಗುಳಿಯಲಿದ್ದಾರೆ. ಅಲ್ಲದೇ ಹರ್ಷಲ್ ಬದಲಿಗೆ ದೀಪಕ್ ಚಾಹರ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಪಿಚ್ ಮತ್ತು ಮಳೆಯಿಂದಾಗಿ ಗುರುವಾರದ ಅಭ್ಯಾಸವನ್ನು ರದ್ದುಗೊಳಿಸಲಾಗಿತ್ತು. ಪಂದ್ಯದ ದಿನವೂ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ ಇಲ್ಲಿನ ವಿಕೆಟ್ ಬೌಲರ್ ಗಳಿಗೆ ಸೂಕ್ತವಾಗಿದೆ. ಈ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ (ಬಾಂಗ್ಲಾದೇಶ ವಿರುದ್ಧ) ದೀಪಕ್ ಚಹಾರ್ ಏಳು ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಬಳಿಸಿದರು.