ಶೇಕ್ ಹ್ಯಾಂಡ್ ಮಾಡಲೇಬೇಕು ಎಂಬ ರೂಲ್ಸ್ ಯಾವ ಕ್ರೀಡಾ ರೂಲ್ಸ್ ಬುಕ್‌ಗಳಲ್ಲೂ ಇಲ್ಲ. ಅದು ಕ್ರಿಕೆಟ್ ಇರಲಿ.. ಬೇರೆ ಯಾವುದೇ ಕ್ರೀಡೆಯೇ ಆಗಿರಲಿ.. ಶೇಕ್ ಹ್ಯಾಂಡ್ ಅನ್ನೋದು ಜಸ್ಟ್ ಸಂಪ್ರದಾಯ. ಆಟಗಾರರು ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವುದು ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ. ಇದೀಗ ಶೇಕ್ ಹ್ಯಾಂಡ್ ಅನ್ನೋದೇ ದೊಡ್ಡ ಟ್ರೆಂಡಿಂಗ್ ನ್ಯೂಸ್ ಆಗಿಬಿಟ್ಟಿದೆ. ಅಷ್ಟಕ್ಕೂ ಟ್ರೆಂಡಿಂಗ್ ನ್ಯೂಸ್‌ನ ರೂವಾರಿ ಟೀಮ್ ಇಂಡಿಯಾ ಟಿ-೨೦ ತಂಡದ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್.
ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಆಟಕ್ಕಿಂತಲೂ ಹೆಚ್ಚು ಸುದ್ದಿಯಾಗಿದ್ದು ಶೇಕ್ ಹ್ಯಾಂಡ್ ವಿಚಾರ. ಟಾಸ್ ವೇಳೆ ಟೀಮ್ ಇಂಡಿಯಾ ನಾಯಕ ಸ್ಕೈ, ಪಾಕ್ ನಾಯಕ ಸಲ್ಮಾನ್‌ನ ಮುಖವನ್ನು ನೋಡಿಲ್ಲ. ಟಾಸ್ ವೇಳೆ ಶೇಕ್ ಹ್ಯಾಂಡ್ ಕೂಡ ಮಾಡಿಲ್ಲ. ಅಷ್ಟೇ ಅಲ್ಲ, ಪಂದ್ಯ ಗೆದ್ದ ನಂತ್ರ ಶೇಕ್ ಹ್ಯಾಂಡ್ ಮಾಡಲು ಪಾಕ್ ಕ್ರಿಕೆಟಿಗರು ಕಾಯುತ್ತಿದ್ರೆ, ಇತ್ತ ಟೀಮ್ ಇಂಡಿಯಾ ಆಟಗಾರರು ಡ್ರೆಸ್ಸಿಂಗ್ ರೂಮ್ ಸೇರಿಕೊಂಡು ಬಾಗಿಲು ಮುಚ್ಚಿರುವ ದೃಶ್ಯವನ್ನು ಪಾಕ್ ಆಟಗಾರರು ಮತ್ತು ಪಾಕ್ ಕ್ರಿಕೆಟ್ ಪ್ರೇಮಿಗಳು ಜೀವಮಾನದಲ್ಲಿ ಮರೆಯಲ್ಲ. ಇಂತಹ ಒಂದು ಅವಮಾನವನ್ನು ಅವರು ಊಹೆ ಕೂಡ ಮಾಡಿರಲಿಕ್ಕಿಲ್ಲ. ಆದ್ರೆ ಟೀಮ್ ಇಂಡಿಯಾ ಆಟಗಾರರು ದುಬೈನಲ್ಲಿ ಅದು ಕೂಡ ಪಾಕ್ ಕ್ರಿಕೆಟ್ ಅಭಿಮಾನಿಗಳ ಎದುರಿನಲ್ಲೇ ಪಾಕ್‌ಗೆ ಮುಖಭಂಗ ಮಾಡಿರೋದನ್ನು ಕೂಡ ಕೆಲವು ವಿಚಾರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಗ್ರರ ದಾಳಿಗೆ ಬಲಿಯಾದ ಕುಟುಂಬಸ್ಥರು, ದೇಶದ ಸೈನಿಕರು ಟೀಮ್ ಇಂಡಿಯಾ ಆಟಗಾರರಿಗೆ ಈಗ ನೆನಪು ಆಗಿರೋದಾ ಅಂತ ಕೇಳಿದ್ದಾರೆ. ಅದು ಅವರವರ ವೈಯಕ್ತಿಕ ವಿಚಾರ.
ಆದ್ರೆ ಟೀಮ್ ಇಂಡಿಯಾ ಆಟಗಾರರು ವ್ಯಕ್ತಪಡಿಸಿದ್ದ ವೇದಿಕೆ ಯಾವುದು ಅನ್ನೋದು ಕೂಡ ಮುಖ್ಯ ಆಗಿರುತ್ತದೆ. ಅದರಲ್ಲೂ ಭಾರತ- ಪಾಕಿಸ್ತಾನ ಮ್ಯಾಚ್ ಅಂದ್ರೆ ಅದು ಒಂಥರಾ ಹೈವೋಲ್ಟೇಜ್ ಮ್ಯಾಚ್ ಎಂಬುದರಲ್ಲಿ ಎರಡು ಮಾತಿಲ್ಲ. ಸದ್ಯದ ಪಾಕಿಸ್ತಾನ ತಂಡ ಬಲಿಷ್ಠ ತಂಡವೇನೂ ಅಲ್ಲ. ಆದ್ರೂ ಪಾಕ್ ತಂಡವನ್ನು ಲಘುವಾಗಿ ಪರಿಗಣಿಸುವ ಹಾಗಿಲ್ಲ. ಹೀಗಾಗಿ ಈ ಪಂದ್ಯವನ್ನು ಜಗತ್ತಿನ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಖಂಡಿತ ನೋಡಿರುತ್ತಾರೆ. ಅಂದ ಮೇಲೆ ಅಷ್ಟೊಂದು ಜನರ ಎದುರುಗಡೆ ಪಾಕ್ ಕ್ರಿಕೆಟಿಗರಿಗೆ ಅವಮಾನ ಮಾಡಿ ನೇರವಾಗಿ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದು ಸಾಮಾನ್ಯ ವಿಷಯವೇನೂ ಆಗಲ್ಲ. ಅದು ಅಲ್ಲದೆ ಈ ಪಂದ್ಯದ ಗೆಲುವನ್ನು ಆಪರೇಷನ್ ಸಿಂಧೂರದ ಸೈನಿಕರಿಗೆ ಮತ್ತು ಪಹಲ್ಗಾಮ್ ಹುತಾತ್ಮರಿಗೆ ಅರ್ಪಣೆ ಮಾಡಿರೋದು ಕೆಲವರಿಗೆ ದೊಡ್ಡಸ್ಥಿಕೆ ಅನ್ನಿಸಿರಬಹುದು.. ಆದ್ರೆ ಆ ಮಾತು ಹೇಳಿರುವ ವೇದಿಕೆ ಯಾವುದು ಎಂಬುದನ್ನು ಅರಿತುಕೊಳ್ಳಬೇಕು.
ಇನ್ನು ನಾನು ನೀವು ಅಂದುಕೊಂಡಷ್ಟು ಸುಲಭವಾಗಿ ಪಾಕ್ ತಂಡವನ್ನು ಏಷ್ಯಾಕಪ್ ಟೂರ್ನಿಯಿಂದ ಬಾಯ್ಕಾಟ್ ಮಾಡಲು ಸಾಧ್ಯವಿಲ್ಲ. ದ್ವಿಪಕ್ಷೀಯ ಸರಣಿಗಳಲ್ಲಿ ನಾವು ಆಡಲ್ಲ ಅಂತ ಕಡ್ಡಿ ಮುರಿದಂಗೆ ಹೇಳಬಹುದು.. ಆದ್ರೆ ಐಸಿಸಿ ಅಥವಾ ಎಸಿಸಿ ಟೂರ್ನಿಗಳಲ್ಲಿ ಈ ರೀತಿಯ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ಯಾಕಂದ್ರೆ ಒಂದು ರಾಷ್ಟ್ರದ ವಿರುದ್ಧ ಮಾತನಾಡಿ ನಾವು ಬೇರೆ ಬೇರೆ ದೇಶಗಳನ್ನು ಎದುರು ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದೀಗ
ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನಲ್ಲೇ ಸುಮಾರು ೩೦ ದೇಶಗಳು ಸದಸ್ಯತ್ವವನ್ನು ಪಡೆದುಕೊಂಡಿದೆ. ಈ ಪೈಕಿ ಐದು ದೇಶಗಳು ಪೂರ್ಣ ಪ್ರಮಾಣದಲ್ಲಿ ಐಸಿಸಿ ಸದಸ್ಯತ್ವವನ್ನು ಪಡೆದುಕೊಂಡಿದೆ. ಹಾಗೇ ಮೂರು ದೇಶಗಳು ಟಿ-೨೦ ಹಾಗೂ ಏಕದಿನ ಪಂದ್ಯಗಳಿಗೆ ಅರ್ಹತೆ ಪಡೆದ್ರೆ, ೨೦ ದೇಶಗಳು ಟಿ-೨೦ಗೆ ಐಸಿಸಿ ಮಾನ್ಯತೆ ಪಡೆದುಕೊಂಡಿದೆ.
ಹೀಗಾಗಿ ಕೇಂದ್ರ ಸರ್ಕಾರ ಮತ್ತು ಬಿಸಿಸಿಐ ಯೋಚನೆ ಮಾಡಿಯೇ ತೀರ್ಮಾನ ತೆಗೆದುಕೊಂಡಿದೆ. ಈ ಹಿಂದೆ ಎರಡು ಬಾರಿ ಏಷ್ಯಾ ಕಪ್ ಟೂರ್ನಿಯನ್ನು ಬಾಯ್ಕಾಟ್ ಮಾಡಿರಬಹುದು.. ಆದ್ರೆ ಆಗಿನ ಪರಿಸ್ಥಿತಿಯೇ ಬೇರೆ.. ಈಗಿನ ಪರಿಸ್ಥಿತಿಯೇ ಬೇರೆ. ನಿಜ, ಈ ಪಂದ್ಯದಿಂದ ಪಾಕ್ ಕ್ರಿಕೆಟ್ ಬೋರ್ಡ್‌ಗೆ ಹಣ ಬರುತ್ತೆ. ಆದ್ರೆ ಏಷ್ಯಾ ಕಪ್‌ನಲ್ಲಿ ಭಾರತ ಬಾಯ್ಕಾಟ್ ಮಾಡಿದ್ರೆ ಇನ್ನುಳಿದ ದೇಶಗಳಿಗೂ ತೊಂದ್ರೆಯಾಗುತ್ತದೆ. ಅಷ್ಟೇ ಅಲ್ಲ ಬಿಸಿಸಿಐಗೆ ಮುಂದಿನ ದಿನಗಳಲ್ಲಿ ಐಸಿಸಿ ಮೇಲೆ ಹಿಡಿತ ಸಾ಼ಧಿಸಲು ಕೂಡ ಕಷ್ಟ ಆಗುತ್ತೆ ಎಂಬುದನ್ನು ಮರೆಯುವ ಹಾಗಿಲ್ಲ.
ಯಾಕಂದ್ರೆ ಸುಮಾರು ೪೨ ವರ್ಷಗಳ ಹಿಂದೆ ಬಿಸಿಸಿಐ ಅಕೌಂಟ್‌ನಲ್ಲೂ ದುಡ್ಡು ಇರಲಿಲ್ಲ. ೧೯೮೩ರ ವಿಶ್ವಕಪ್ ವಿಜೇತ ತಂಡಕ್ಕೆ ಸನ್ಮಾನ ಮಾಡಲು ಲತಾ ಮಂಗೇಶ್ಕರ್ ಅವರು ಸಂಗೀತ ಕಚೇರಿ ನಡೆಸಬೇಕಾದ ಪರಿಸ್ಥಿತಿ ಬಂದಿತ್ತು. ಅಷ್ಟೇ ಅಲ್ಲ, ೧೯೮೩ರ ವಿಶ್ವಕಪ್ ಫೈನಲ್ ಮ್ಯಾಚ್ ನೋಡಲು ಬಿಸಿಸಿಐ ಅಧಿಕಾರಿಗಳಿಗೆ ಕೇವಲ ಎರಡು ಟಿಕೆಟ್ ನೀಡಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಿರಾಕರಣೆ ಮಾಡಿತ್ತು. ಐಸಿಸಿಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ಗೆ ತಕ್ಕ ಪಾಠ ಕಲಿಸಲು ಹುಟ್ಟಿಕೊಂಡಿದ್ದೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್. ಇದರ ರೂವಾರಿ ಆಗಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಎನ್.ಪಿ.ಕೆ. ಸಾಳ್ವೆ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಮೊದಲ ಅಧ್ಯಕ್ಷರಾಗಿದ್ದರು. ಮುಂದಿನ ದಿನಗಳಲ್ಲಿ ಈ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನನ್ನು ಮುಂದಿಟ್ಟುಕೊಂಡೇ ಬಿಸಿಸಿಐ ವಿಶ್ವ ಕ್ರಿಕೆಟ್‌ನ ದೊಡ್ಡಣ್ಣನಾಗಿರುವುದು. ಅಷ್ಟೇ ಯಾಕೆ ಜಗಮೋಹನ್ ದಾಲ್ಮಿಯಾ ಅವರಿಂದ ಹಿಡಿದು ಈಗಿನ ಜೈ ಶಾ ತನಕ ಭಾರತೀಯರು ಐಸಿಸಿ ಮುಖ್ಯಸ್ಥರಾಗಿರುವುದು ಎಂಬುದು ಕೂಡ ಅಷ್ಟೇ ಸತ್ಯ.
ಹೀಗಾಗಿ ಇಲ್ಲಿ ಕ್ರಿಕೆಟ್, ದುಡ್ಡು ನೆಪ ಮಾತ್ರ. ಇಲ್ಲೂ ಕೂಡ ದೊಡ್ಡ ರಾಜಕೀಯದಾಟವಿದೆ. ತಂತ್ರ, ಪ್ರತಿತಂತ್ರಗಳ ಜೊತೆ ಚಾಣಕ್ಯ ರಾಜನೀತಿಗಳೂ ಇವೆ. ಇದನ್ನು ಅರಿತುಕೊಳ್ಳುವುದು ಕಷ್ಟ.. ಕ್ರೀಡೆಯಿಂದ ಶಾಂತಿ ಸೌರ್ಹಾದತೆ ಬೆಳೆಯುತ್ತದೆ ಎಂಬುದು ಮಾತಿಗಷ್ಟೇ ಹೇಳಬಹುದು. ಸದ್ಯದ ಸ್ಥಿತಿಯಲ್ಲಿ ಆಟವನ್ನು ಆಟವಾಗಿ ನೋಡೋಣ. ಶೇಕ್ ಹ್ಯಾಂಡ್ ಕೊಟ್ಟಿಲ್ಲ.. ಮುಖ ತಿರುಗಿಸಿಕೊಂಡು ಹೋದ್ರು ಎಂಬುದು ಆ ಪರಿಸ್ಥಿತಿಗಷ್ಟೇ ಸೀಮಿತ.. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾದ್ರೆ ಭಾರತದಲ್ಲೇ ಕ್ರಿಕೆಟ್ ಆಡಬಹುದು.. ವಾಜಪೇಯಿ ಪಿಎಂ ಆಗಿದ್ದಾಗ ದ್ವಿಪಕ್ಷೀಯ ಸರಣಿ ಆಡಿ ಕಾರ್ಗಿಲ್ ಯುದ್ಧವಾಯ್ತು. ಮುಷರಫ್ ಮಾತು ನಂಬಿ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಿ ಮುಂಬೈ ಬ್ಲಾಸ್ಟ್ ಮಾಡಿದ್ರು.. ಆ ನಂತರ ಕೇಂದ್ರದ ಕಠಿಣ ನಿರ್ಧಾರದಿಂದ ಈಗ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲ. ಸದ್ಯದ ಸ್ಥಿತಿ ನೋಡಿದ್ರೆ ಮುಂದೆ ನಡೆಯೋದು ಕೂಡ ಕಷ್ಟ.
ಕೊನೆಯದಾಗಿ ಭಾರತ ಫೈನಲ್ ಗೆದ್ರೆ ಟ್ರೋಫಿಯನ್ನು ಎಸಿಸಿ ಅಧ್ಯಕ್ಷ ಸ್ಥಾನದಲ್ಲಿರುವ ಪಾಕಿಸ್ತಾನದ ಮೋಶಿನ್ ನಖ್ವಿ ಕೈಯಿಂದ ಟೀಮ್ ಇಂಡಿಯಾ ಆಟಗಾರರು ಪಡೆದುಕೊಳ್ತಾರಾ..?
ಲೇಖಕರು: ಸನತ್ ರೈ








