ಚೀನಾ ವಿರುದ್ಧ ಭಾರತ ಎರಡು ಯುದ್ಧದಲ್ಲೂ ಗೆಲ್ಲಲಿದೆ – ಅರವಿಂದ್ ಕೇಜ್ರಿವಾಲ್
ಹೊಸದಿಲ್ಲಿ, ಜೂನ್ 23: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನೆರೆ ರಾಷ್ಟ್ರ ಚೀನಾ ವಿರುದ್ಧ ಭಾರತ ಎರಡು ಯುದ್ಧ ಮಾಡುತ್ತಿದ್ದು, ಎರಡು ಯುದ್ಧದಲ್ಲೂ ಭಾರತ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಕೊರೊನಾ ಸೋಂಕನ್ನು ಚೀನಾ ನಿರ್ಮಿತ ಎಂದಿರುವ ಕೇಜ್ರಿವಾಲ್ ಇಂದು ನಾವು ಚೀನಾದೊಡನೆ
ಗಡಿಯಲ್ಲಿ ಮತ್ತು ಚೀನಾದಿಂದ ಸೃಷ್ಟಿಯಾಗಿರುವ ಕೊರೊನಾ ಸೋಂಕಿನ ವಿರುದ್ಧ ಯುದ್ಧ ಮಾಡುತ್ತಿದ್ದೇವೆ. ಭಾರತದ ಗಡಿಯಲ್ಲಿ ನಮ್ಮ ಯೋಧರು ಚೀನಿ ಸೇನೆ ಜೊತೆ ಹೋರಾಡುತ್ತಿದ್ದರೆ, ವೈದ್ಯಕೀಯ ವಲಯ ಕೊರೊನಾ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದಾರೆ. ಇಡೀ ದೇಶವು ಆರೋಗ್ಯ ಕಾರ್ಯಕರ್ತರೊಡನೆ ಮತ್ತು ಸೈನಿಕರೊಂದಿಗೆ ಇದೆ. ದೇಶ ರಕ್ಷಣೆಯಲ್ಲಿ ನಮ್ಮ ಇಪ್ಪತ್ತು ಧೈರ್ಯಶಾಲಿ ಸೈನಿಕರು ಹಿಂದೆ ಸರಿಯಲಿಲ್ಲ, ಹಾಗೆ ನಾವು ಕೂಡ ಹಿಂದೆ ಸರಿಯುವುದಿಲ್ಲ. ಚೀನಾದ ವಿರುದ್ಧದ ಎರಡು ಯುದ್ಧಗಳಲ್ಲಿ ಎಲ್ಲಾ ದೇಶವಾಸಿಗಳು ಒಂದಾಗಬೇಕು ಎಂದು ಹೇಳಿದ ಕೇಜ್ರಿವಾಲ್ ಒಗ್ಗಟ್ಟಾಗಿ ಹೋರಾಡಬೇಕಾದ ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.
ದೆಹಲಿಯಲ್ಲಿ ಇಲ್ಲಿಯವರೆಗೆ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ 59,746ಕ್ಕೆ ತಲುಪಿದ್ದು, 24,558 ಸಕ್ರಿಯ ಪ್ರಕರಣಗಳಿದ್ದರೆ, 33,013 ಜನರು ಗುಣಮುಖರಾಗಿದ್ದಾರೆ.