ಟಿ20 ವಿಶ್ವಕಪ್(T20 World Cup 2024) ಸೂಪರ್ 8ರಲ್ಲಿ ಭಾರತವು ಅಫ್ಘಾನಿಸ್ತಾನ್ (India vs Afghanistan) ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ ಭಾರತ ತಂಡ ತನ್ನ ಅಜೇಯ ನಾಗಾಲೋಟ ಮುಂದುವರೆಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತ್ತು. 182 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಅಫ್ಘಾನ್ ತಂಡ ಬುಮ್ರಾ (Jasprit Bumrah) ದಾಳಿಗೆ ನಲುಗಿ ಹೀನಾಯ ಸೋಲು ಕಂಡಿತು.
ಭಾರತಕ್ಕೆ ಈ ಪಂದ್ಯದಲ್ಲಿ ಕೂಡ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ 8 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಪಂತ್ ಕೂಡ 20 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡರು. ಕೊಹ್ಲಿ 24 ಬೌಲ್ ಎದುರಿಸಿ 24 ರನ್ ಗಳಿಸಿದರು.
ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಸೂರ್ಯಕುಮಾರ್ 28 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು. ಹಾರ್ದಿಕ್ 24 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ಗಳ ಸಹಾಯದಿಂದ 32 ರನ್ ಗಳಿಸಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ ಉತ್ತಮವಾಗಿ ಬ್ಯಾಟ್ ಬೀಸಿ ತಂಡವನ್ನು 180ರ ಗಡಿ ದಾಟಿಸಿದರು.
ಅಫ್ಘಾನ್ ಪರ ಫಜಲ್ಹಕ್ ಫಾರೂಕಿ ಮತ್ತು ನಾಯಕ ರಶೀದ್ ಖಾನ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಭಾರತ ನೀಡಿದ 183 ರನ್ ಗಳ ಗುರಿ ಬೆನ್ನಟ್ಟಿದ ಅಫ್ಘಾನ್ ಪರ ಅಜ್ಮತುಲ್ಲಾ ಒಮರ್ಜಾಯ್ 20 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಗರಿಷ್ಠ 26 ರನ್ ಗಳಿಸಿದರು. ಅಫ್ಘಾನ್ ಗೆ ಉತ್ತಮ ಆರಂಭ ಸಿಗದ ಕಾರಣ ತಂಡ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಸೂಪರ್ 8 ಹಂತದ ಗ್ರೂಪ್ 1 ರಲ್ಲಿ ಭಾರತ ಎರಡು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.