ಕೊಲಂಬೊ: ಯಶಸ್ವಿ, ಸೂರ್ಯ ಹಾಗೂ ಬೌಲಿಂಗ್ ಸಂಘಟನೆಯಿಂದಾಗಿ ಭಾರತ ತಂಡವು ಶ್ರೀಲಂಕಾ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಟಿ20 ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. 162 ರನ್‌ಗಳ ಗುರಿ ಬೆನ್ನತ್ತಿದ ಭಾರತ ಮೊದಲ ಮೂರು ಎಸೆತಗಳಲ್ಲಿ 6 ರನ್ ಗಳಿಸುತ್ತಿದ್ದಂತೆ ಮಳೆ ಆರಂಭವಾಯಿತು. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಟೀಂ ಇಂಡಿಯಾಕ್ಕೆ 8 ಓವರ್‌ಗಳಲ್ಲಿ 78 ರನ್ ಗುರಿ ನೀಡಲಾಯಿತು. ಸ್ಪರ್ಧಾತ್ಮಕ ಗುರಿ ಪಡೆದ ಭಾರತ ಕೇವಲ 6.3 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿ ಗೆಲುವಿನ ದಡ ಸೇರಿತು.
ಯಶಸ್ವಿ ಜೈಸ್ವಾಲ್ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ್ರೆ ಸಂಜು ಸ್ಯಾಮ್ಸನ್ ಮೊದಲ ಎಸೆತದಲ್ಲಿ ಡಕ್ ಆಗುವ ಮೂಲಕ ಆಘಾತ ನೀಡಿದರು. ನಂತರ ಸೂರ್ಯಕುಮಾರ್ ಯಾದವ್, ಜೈಸ್ವಾಲ್ ಜೊತೆಗೂಡಿ ಲಂಕಾ ಬೌಲರ್‌ಗಳಲ್ಲ ಬೆಂಡೆತ್ತಿದರು. 216.66 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯ 12 ಎಸೆತಗಳಲ್ಲಿ ಸ್ಫೋಟಕ 26 ರನ್ ಗಳಿಸಿದರು. ಜೈಸ್ವಾಲ್ 15 ಎಸೆತಗಳಲ್ಲಿ 30 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 22 ರನ್ ಗಳಿಸಿದರು. ರಿಷಭ್ ಪಂತ್ 2 ರನ್ ಗಳಿಸಿ ಅಜೇಯರಾಗುಳಿದರು.
ಭಾರತದ ಪರ ರವಿ ಬಿಷ್ಣೋಯಿ 3 ವಿಕೆಟ್ , ಅರ್ಷ್ ದೀಪ್ ಸಿಂಗ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು.








