ಟಿ20 ವಿಶ್ವಕಪ್ ನಲ್ಲಿ ಭಾರತ ವನಿತಾ ಪಡೆ ಹಾಗೂ ಶ್ರೀಲಂಕಾ ಮಹಿಳಾ ತಂಡವನ್ನು ಭರ್ಜರಿ ಅಂತರದಿಂದ ಸೋಲಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಶ್ರೀಲಂಕಾ ತಂಡವನ್ನು ಬರೋಬ್ಬರಿ 82 ರನ್ ಗಳಿಂದ ಸೋಲಿಸಿದೆ. ಈ ಮೂಲಕ ಕಳೆದ ಏಷ್ಯಾಕಪ್ ಫೈನಲ್ ನಲ್ಲಿ ಸೋತ ಸೋಲಿಗೂ ಸೇಡು ತೀರಿಸಿಕೊಂಡಿದೆ. ಅಲ್ಲದೇ, ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿ ನೆಟ್ ರನ್ ರೇಟ್ ನ್ನು ಸಹ ಮೈನಸ್ನಿಂದ ಪ್ಲಸ್ ಗೆ ಬದಲಾಯಿಸಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್ಪ್ರೀತ್ ಪಡೆ 3 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಪೂರ್ಣ 20 ಓವರ್ ಗಳನ್ನು ಆಡದೆ 19.5 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಗಳನ್ನು ಕಳೆದಕೊಂಡು 90 ರನ್ ಗಳಿಸಿ ಸೋಲು ಕಂಡಿತು.
ಲಂಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ. ಈ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆಯಿತು. ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಕೇವಲ 12.4 ಓವರ್ಗಳಲ್ಲಿ 98 ರನ್ಗಳ ಜೊತೆಯಾಟ ನೀಡಿದರು. 50 ರನ್ ಗಳಿಸಿದ ನಂತರ ಸ್ಮೃತಿ ಔಟಾದರೆ, ಶಫಾಲಿ 40 ರನ್ ಗಳ ಕಾಣಿಕೆ ಸಲ್ಲಿಸಿದರು.
ಆನಂತರ ತಂಡದ ಜವಾಬ್ದಾರಿಯನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ ವಹಿಸಿದರು. ಹರ್ಮನ್ ಪ್ರೀತ್ ಕೇವಲ 27 ಎಸೆತಗಳಲ್ಲಿ 52 ರನ್ ಗಳಿಸಿದರು. ಈ ಮೂಲಕ ಟಿ20 ವಿಶ್ವಕಪ್ ನ ಇತಿಹಾಸದಲ್ಲಿ ಭಾರತದ ವೇಗದ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು. ಹರ್ಮನ್ ಗೆ ಸಾಥ್ ನೀಡಿದ ಜಮೀಮಾ 16 ರನ್ ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೇವಲ 6 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಕೊನೆಗೆ ಭಾರತದ ಬೌಲರ್ ಗಳ ವಿರುದ್ಧ ಮಂಕಾಗಿ ಸೋಲು ಕಂಡಿತು.








