ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಆರ್ಎಸ್ಎಸ್ ನಡುವಿನ ಸಮರ ಈಗ ಮತ್ತಷ್ಟು ತೀವ್ರಗೊಂಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಇತಿಹಾಸ ಮತ್ತು ಹೈದರಾಬಾದ್ ಕರ್ನಾಟಕದ ವಿಮೋಚನೆಯ ವಿಷಯವನ್ನು ಇಟ್ಟುಕೊಂಡು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ತಂಗಾಳಿಯಂತೆ ಶುರುವಾಗಿ ಈಗ ಬೆಂಕಿಯಂತೆ ಭುಗಿಲೆದ್ದಿದೆ.
ಖರ್ಗೆ ಕುಟುಂಬದ ಬಗ್ಗೆ ಬಿ.ಎಲ್. ಸಂತೋಷ್ ಹೇಳಿದ್ದೇನು?
ಇತ್ತೀಚೆಗೆ ನಡೆದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಬಿ.ಎಲ್. ಸಂತೋಷ್, ಆರ್ಎಸ್ಎಸ್ ನೋಂದಣಿ ಆಗಿಲ್ಲ, ಮುಂದೆ ಮಾಡುವುದೂ ಇಲ್ಲ ಎಂದು ನೇರವಾಗಿ ಹೇಳಿದ್ದರು. ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡುವ ರಭಸದಲ್ಲಿ, ನಿಮ್ಮ ಕುಟುಂಬ ರಜಾಕರ ದಾಳಿಗೆ ಹೆದರಿ ಹುಟ್ಟು ಬಟ್ಟೆಯಲ್ಲಿ ಬೀದರ್ನಿಂದ ಕಲಬುರಗಿಗೆ ಓಡಿ ಬಂದು ಜೀವನ ಕಟ್ಟಿಕೊಂಡಿದೆ. ಆಗ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಓಡೋಡಿ ಬಂದಾಗ ಅವರನ್ನು ಮತ್ತು ಈ ಭಾಗದ ಹಿಂದೂಗಳನ್ನು ರಕ್ಷಿಸಿದ್ದು ಇದೇ ಆರ್ಎಸ್ಎಸ್. ಆಗ ನಿಮ್ಮ ಪೊಲೀಸರು ಬರಲಿಲ್ಲ, ರಾಜಕಾರಣಿಗಳು ಬರಲಿಲ್ಲ, ಆರ್ಎಸ್ಎಸ್ ಕಾರ್ಯಕರ್ತರು ರಸ್ತೆಯಲ್ಲಿ ನಿಂತು ಹೋರಾಡಿದ್ದರು ಎಂದು ಹೇಳಿಕೆ ನೀಡಿದ್ದರು.
ಇತಿಹಾಸವೇ ಗೊತ್ತಿಲ್ಲದ ಸಂತೋಷ್ಗೆ ಸಚಿವ ಪ್ರಿಯಾಂಕ್ ಸವಾಲ್
ಬಿ.ಎಲ್. ಸಂತೋಷ್ ಹೇಳಿಕೆಗೆ ಕಲಬುರಗಿಯಲ್ಲಿ ಅತ್ಯಂತ ಖಡಕ್ ಆಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಂತೋಷ್ ಅವರಿಗೆ ಇತಿಹಾಸದ ಕನಿಷ್ಠ ಜ್ಞಾನವೂ ಇಲ್ಲ ಎಂದು ಕಿಡಿಕಾರಿದ್ದಾರೆ. ನಮ್ಮ ಕುಟುಂಬವನ್ನು ರಕ್ಷಿಸಿದ್ದು ಆರ್ಎಸ್ಎಸ್ ಅಲ್ಲ, ಬದಲಿಗೆ ಭಾರತೀಯ ಸೇನೆ. ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲರು ಕೈಗೊಂಡ ‘ಆಪರೇಷನ್ ಪೋಲೋ’ ಸೇನಾ ಕಾರ್ಯಾಚರಣೆಯಿಂದಾಗಿ ಹೈದರಾಬಾದ್ ಕರ್ನಾಟಕ ರಜಾಕರ ಕಪಿಮುಷ್ಟಿಯಿಂದ ವಿಮೋಚನೆಗೊಂಡಿತು. ಕಲಬುರಗಿಯಲ್ಲಿ ಇಂದು ಇರುವುದು ಸರ್ದಾರ್ ಪಟೇಲರ ಪ್ರತಿಮೆಯೇ ಹೊರತು, ಯಾವನೋ ಚಡ್ಡಿ ಹಾಕಿಕೊಂಡು ನಿಂತಿರುವ ಪ್ರತಿಮೆಯಲ್ಲ ಎಂದು ಪ್ರಿಯಾಂಕ್ ಖರ್ಗೆ ನೇರ ವಾಗ್ದಾಳಿ ನಡೆಸಿದ್ದಾರೆ.
ನನಗೆ ಆರ್ಎಸ್ಎಸ್ ಭಯವಿಲ್ಲ, ಅವರಿಗೆ ‘ಪ್ರಿಯಾಂಕ್ ಫೋಬಿಯಾ’ ಇದೆ
ತಮಗೆ ಆರ್ಎಸ್ಎಸ್ ಎಂದರೆ ಭಯವಿಲ್ಲ ಎಂದಿರುವ ಪ್ರಿಯಾಂಕ್ ಖರ್ಗೆ, ಹೆದರಲು ಅವರೇನು ಎಂದು ಪ್ರಶ್ನಿಸಿದ್ದಾರೆ. ನನಗೆ ಆರ್ಎಸ್ಎಸ್ ಭಯವಿಲ್ಲ, ಬದಲಿಗೆ ಅವರಿಗೆ ‘ಪ್ರಿಯಾಂಕ್ ಫೋಬಿಯಾ’ ಕಾಡುತ್ತಿದೆ. ಸ್ವತಃ ಸಾವರ್ಕರ್ ಅವರಿಗೆ ‘ವೀರ್’ ಎಂಬ ಬಿರುದನ್ನು ಯಾರು ಕೊಟ್ಟರು ಎಂದು ಪ್ರಶ್ನಿಸಿದರೆ ಸಂಸತ್ತಿನಲ್ಲಿ ಇವತ್ತಿಗೂ ಇವರು ಬಾಯಿ ಬಿಡುವುದಿಲ್ಲ. ನಮ್ಮ ಬಗ್ಗೆ ಮಾತನಾಡುವ ಇವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕನಿಷ್ಠ ಐದು ಜನ ಆರ್ಎಸ್ಎಸ್ ನಾಯಕರ ಹೆಸರುಗಳನ್ನು ಹೇಳಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಯಾವ ಬಿಜೆಪಿ ನಾಯಕರ ಮಕ್ಕಳು ಶಾಖೆಗೆ ಹೋಗುತ್ತಾರೆ ತೋರಿಸಿ?
ಆರ್ಎಸ್ಎಸ್ ಸಂಘಟನೆಯನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಟಾಂಗ್ ನೀಡಿರುವ ಸಚಿವರು, ಹೌದು, ನೀವು ಸಂಘವನ್ನು ಎಲ್ಲೂ ನೋಂದಣಿ ಮಾಡಿಕೊಂಡಿಲ್ಲ, ಹಾಗಾಗಿ ಕಾನೂನಾತ್ಮಕವಾಗಿ ಬ್ಯಾನ್ ಮಾಡಲು ಆಗಲ್ಲ. ನಿಮ್ಮದು ಸಾಂಸ್ಕೃತಿಕ ಸಂಘ ಎಂದು ಹೇಳಿಕೊಳ್ಳುತ್ತೀರಾ, ಆದರೆ ಪ್ರಶ್ನೆ ಮಾಡಿದರೆ ಮನೆ ಬಿಟ್ಟು ಹೊರಗೆ ಬರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತೀರಾ? ಇಷ್ಟೆಲ್ಲಾ ದೇಶಭಕ್ತಿ ಮಾತನಾಡುವ ಬಿಜೆಪಿ ನಾಯಕರಲ್ಲಿ ಯಾವ ನಾಯಕನ ಮಕ್ಕಳು ಫುಲ್ ಟೈಮ್ ಆರ್ಎಸ್ಎಸ್ ಶಾಖೆಗೆ ಹೋಗುತ್ತಾರೆ ಎಂಬುದನ್ನು ಮೊದಲು ತೋರಿಸಲಿ ಎಂದು ಪ್ರಶ್ನಿಸುವ ಮೂಲಕ ಆರ್ಎಸ್ಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಖರ್ಗೆ ತೀವ್ರ ಪ್ರಹಾರ ನಡೆಸಿದ್ದಾರೆ.







