ಜೈಪುರ: ಜರ್ಜರಿತಗೊಂಡಿದ್ದ ಸರ್ಕಾರಿ ಶಾಲೆಯ ಕಟ್ಟಡದ ಛಾವಣಿ ಕುಸಿದು ಬಿದ್ದಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳದಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ತೀವ್ರ ಹೈಡ್ರಾಮಾ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕ ಆಶುತೋಷ್ ರಾಂಕಾ, ಪರಿಸ್ಥಿತಿ ತಿಳಿಗೊಳಿಸಲು ಬಂದ ಪೊಲೀಸ್ ಅಧಿಕಾರಿಗೇ ಬಹಿರಂಗವಾಗಿ ಧಮ್ಕಿ ಹಾಕಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಶಾಲಾ ಕಟ್ಟಡ ಕುಸಿತ, ಉದ್ವಿಗ್ನ ಸ್ಥಿತಿ
ಅಲ್ವಾರ್ ಜಿಲ್ಲೆಯ ಥಾನಾಗಾಜಿ ತಾಲೂಕಿನ ಜೋಧಾವಾಸ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಜರ್ಜರಿತ ಕಟ್ಟಡದ ಛಾವಣಿಯ ಒಂದು ಭಾಗ ಶುಕ್ರವಾರ ದಿಢೀರನೆ ಕುಸಿದು ಬಿದ್ದಿತ್ತು. ಅದೃಷ್ಟವಶಾತ್ ಆ ಸಮಯದಲ್ಲಿ ಅನಾಹುತ ತಪ್ಪಿದ್ದು, ಯಾವುದೇ ಮಗುವಿಗೂ ಗಾಯಗಳಾಗಿಲ್ಲ. ಆದರೆ, ಶಾಲೆಯ ನಾಲ್ಕು ಕೊಠಡಿಗಳು ತೀವ್ರ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಸ್ಥಳೀಯ ಆಡಳಿತ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಶಾಲೆಯ ಎದುರು ಧರಣಿ ಕುಳಿತು ಪ್ರತಿಭಟನೆ ಆರಂಭಿಸಿದರು.
ಖಾಕಿ ಪಡೆಗೆ ಸವಾಲೆಸೆದ ಸಿಜೆಪಿ ನಾಯಕ
ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸಿಜೆಪಿ ನಾಯಕ ಆಶುತೋಷ್ ರಾಂಕಾ ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಧಾವಿಸಿ ಧರಣಿಗೆ ಸಾಥ್ ನೀಡಿದರು. ಪ್ರತಿಭಟನಾ ನಿರತರನ್ನು ತೆರವುಗೊಳಿಸಲು ಥಾನಾಗಾಜಿ ಪೊಲೀಸ್ ಠಾಣಾಧಿಕಾರಿ ಮಹಾವೀರ್ ಸಿಂಗ್ ಆಗಮಿಸಿ ವಿನಂತಿಸಿಕೊಂಡರು. ಆದರೆ ಪೋಲಿಸರು ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದಾಗ ರಾಂಕಾ ಮತ್ತು ಪೋಲೀಸ್ ಅಧಿಕಾರಿಯ ನಡುವೆ ತೀವ್ರ ವಾಗ್ವಾದ ನಡೆಯಿತು.
ಈ ವೇಳೆ ಆಕ್ರೋಶದಿಂದ ಕೂಗಾಡಿದ ರಾಂಕಾ, ನನ್ನ ಜೊತೆ ರಾಜಕೀಯ ಆಟ ಆಡಲು ಬರಬೇಡಿ. ನೆನಪಿಟ್ಟುಕೊಳ್ಳಿ, ದೆಹಲಿಯ ಜಂತರ್ ಮಂತರ್ನಲ್ಲಿ ನಾವು ನಡೆಸಿದ ಹೋರಾಟದಿಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನೇ ಹುದ್ದೆಯಿಂದ ತೆಗೆಸಿ ಬಂದಿದ್ದೇವೆ. ಅಂತಹುದರಲ್ಲಿ ನೀನ್ಯಾವ ಲೆಕ್ಕ ಎಂದು ಪೊಲೀಸ್ ಅಧಿಕಾರಿಗೆ ಬಹಿರಂಗವಾಗಿಯೇ ಬೆದರಿಕೆ ಹಾಕಿದರು.
ಬಿಜೆಪಿ ವಿರುದ್ಧ ಆರೋಪ, ಐದು ಗಂಟೆಗಳ ಧರಣಿ
ಪೊಲೀಸರೊಂದಿಗಿನ ತಳ್ಳಾಟದ ವೇಳೆ ಯುವಕನೊಬ್ಬನ ಅಂಗಿ ಹರಿದು ಹೋಗಿದ್ದು, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶಾಲೆ ಪ್ರವೇಶಿಸಿ ಗೊಂದಲ ಸೃಷ್ಟಿಸಿದ್ದಾರೆ ಎಂದು ರಾಂಕಾ ಆರೋಪಿಸಿದರು. ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ಹೋರಾಡಿದಂತೆಯೇ, രാജಸ್ಥಾನದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಜೀವದ ಜೊತೆ ಚೆಲ್ಲಾಟವಾಡಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.
ಸುಮಾರು ಐದು ಗಂಟೆಗಳ ಕಾಲ ನಡೆದ ಸುದೀರ್ಘ ಧರಣಿ, ತೀವ್ರ ತಳ್ಳಾಟ ಮತ್ತು ಕಾವೇರಿದ ಚರ್ಚೆಯ ನಂತರ, ಅಂತಿಮವಾಗಿ ಸ್ಥಳೀಯ ಆಡಳಿತವು ಪ್ರತಿಭಟನಾಕಾರರ ಮುಂದೆ ಮಂಡಿಯೂರಿತು. ಜರ್ಜರಿತ ಕಟ್ಟಡದ ತೆರವು ಮತ್ತು ಶಾಲಾ ಮಕ್ಕಳಿಗೆ ತಕ್ಷಣವೇ ಪರ್ಯಾಯ ಕೊಠಡಿ ವ್ಯವಸ್ಥೆ ಮಾಡಿಕೊಡುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದ ಬಳಿಕವಷ್ಟೇ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.








