ಪರ್ತ್: ಆಸ್ಟ್ರೇಲಿಯಾ-ಭಾರತದ (Aus vs Ind) ಮಧ್ಯೆ 5 ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ನಲ್ಲಿ ಭಾರತೀಯ ಬೌಲರ್ ಗಳು ಮೇಲುಗೈ ಸಾಧಿಸಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಮೊದಲ ದಿನವೇ 17 ವಿಕೆಟ್ ಪತನವಾಗಿದೆ. 1952ರ ನಂತರ ಆಸ್ಟ್ರೇಲಿಯಾದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದ ಮೊದಲ ದಿನವೇ ಅತಿಹೆಚ್ಚು ವಿಕೆಟ್ ಪತನವಾಗಿದೆ. ಮೊದಲ ದಿನದ ಅಂತ್ಯಕ್ಕೆ 27 ಓವರ್‌ಗಳಲ್ಲಿ 67 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿರುವ ಆಸೀಸ್ 83 ರನ್ ಗಳ ಹಿನ್ನಡೆಯಲ್ಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ (Team India), ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತ ಎಂದು ಭಾವಿಸಿದ್ದ ಆಸೀಸ್ ಬ್ಯಾಟರ್‌ಗಳಿಗೆ ಭಾರತೀಯ ಬೌಲರ್ ಗಳು ಕಂಟಕವಾದರು. ನಾಯಕ ಜಸ್ಪ್ರೀತ್ ಬುಮ್ರಾ (Jasprit Bumrah), ಮೊಹಮ್ಮದ್ ಸಿರಾಜ್ ಹಾಗೂ ಹರ್ಷಿತ್ ರಾಣಾ ಅವರ ವೇಗದ ದಾಳಿಗೆ ಆಸೀಸ್ ಪಡೆ ನಲುಗಿತು.
ಆರಂಭಿಕ ಆಟಗಾರರಾದ ಉಸ್ಮಾನ್ ಖವಾಜ (8 ರನ್), ನಾಥನ್ ಮೆಕ್‌ಸ್ವೀನಿ (10 ರನ್), ಮಾರ್ನಸ್ ಲಾಬುಶೇನ್ (2 ರನ್), ಟ್ರಾವಿಸ್ ಹೆಡ್ (11 ರನ್), ಸ್ಟೀವ್ ಸ್ಮಿತ್ (0), ಮಿಚೆಲ್ ಮಾರ್ಷ್ (6 ರನ್), ನಾಯಕ ಪ್ಯಾಟ್ ಕಮ್ಮಿನ್ಸ್ (3 ರನ್) ರನ್ ಗಳಿಸಿ ಔಟ್ ಆದರು. ಅಲೆಕ್ಸ್ ಕ್ಯಾರಿ 28 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 19 ರನ್, ಮಿಚೆಲ್ ಸ್ಟಾರ್ಕ್ 6 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ.
ಭಾರತ ತಂಡದ ನಾಯಕ ಬುಮ್ರಾ 10 ಓವರ್ ಗಳಲ್ಲಿ 17 ರನ್ ನೀಡಿ, ನಾಲ್ಕು ವಿಕೆಟ್ ಕಿತ್ತು ಮಿಂಚಿದ್ದಾರೆ. ಮೊಹಮ್ಮದ್ ಸಿರಾಜ್ 2 ವಿಕೆಟ್ ಹಾಗೂ ಹರ್ಷಿತ್ ರಾಣಾ 1 ವಿಕೆಟ್ ಪಡೆದಿದ್ದಾರೆ.