ಟೀಮ್ ಇಂಡಿಯಾದಲ್ಲಿ ಯಾರ ಸ್ಥಾನವೂ ಗ್ಯಾರಂಟಿ ಇಲ್ಲ… ಇರಲಿ ಜಾಗ್ರತೆ..!

1 min read
virat kohli team india t-20 cricket

ಟೀಮ್ ಇಂಡಿಯಾದಲ್ಲಿ ಯಾರ ಸ್ಥಾನವೂ ಗ್ಯಾರಂಟಿ ಇಲ್ಲ… ಇರಲಿ ಜಾಗ್ರತೆ..!

ಟೀಮ್ ಇಂಡಿಯಾದಲ್ಲಿ ಯಾವೊಬ್ಬ ಆಟಗಾರನ ಸ್ಥಾನವೂ ಗ್ಯಾರಂಟಿ ಇಲ್ಲ. ಈ ಹಿಂದೆ ಕೆಲವು ಆಟಗಾರರು ದಶಕಗಳ ಕಾಲ ಟೀಮ್ ಇಂಡಿಯಾದ ಖಾಯಂ ಆಟಗಾರರಾಗಿ ವಿಶ್ವ ಕ್ರಿಕೆಟ್ ನಲ್ಲಿ ಪ್ರಖರವಾಗಿ ಪ್ರಜ್ವಲಿಸಿದ್ದರು.
ಇದೀಗ ಅದೆಲ್ಲಾ ಇತಿಹಾಸ. ಸದ್ಯದ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾಂತ್ ಶರ್ಮಾ, ಅಶ್ವಿನ್ ನಂತಹ ಆಟಗಾರರು ದಶಕಗಳಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಆದ್ರೆ ಈಗ ಕಾಲ ಬದಲಾಗಿದೆ. ಯುವ ಆಟಗಾರರ ನಡುವೆ ಸ್ಪರ್ಧೆ ಹೆಚ್ಚಾಗುತ್ತಿದೆ. ಅದ್ಭುತವಾದ ಪ್ರತಿಭೆಗಳು ಟೀಮ್ ಇಂಡಿಯಾದ ಕದವನ್ನು ತಟ್ಟುತ್ತಿದ್ದಾರೆ. ಹೀಗಾಗಿ ಆಯ್ಕೆ ಸಮಿತಿಗೆ ತಂಡವನ್ನು ಆಯ್ಕೆ ಮಾಡುವುದು ದೊಡ್ಡ ತಲೆನೋವಾಗಿದೆ.
ಹೌದು, ಸ್ಪರ್ಧಾತ್ಮಕ ದಿನಗಳಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಜಿದ್ದಾಜಿದ್ದಿನ ಪೈಪೋಟಿಯೇ ನಡೆಯುತ್ತಿದೆ. ಈ ಹಿಂದೆ ಕೂಡ ಕೆಲವು ಆಟಗಾರರು ದೇಶಿ ಕ್ರಿಕೆಟ್ ನಲ್ಲಿ ರನ್ ಮಳೆ ಸುರಿಸಿದ್ರೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರಲಿಲ್ಲ. ಇದಕ್ಕೆ ಹಲವಾರು ಕ್ರಿಕೆಟಿಗರ ನಿದರ್ಶನವಿದೆ.
ಈಗಂತೂ ಹೇಳುವುದೇ ಬೇಡ. ಒಬ್ಬರಿಗಿಂತ ಒಬ್ಬರು ಪ್ರಚಂಡ ಆಟಗಾರರು ಹೊರಹೊಮ್ಮುತ್ತಿದ್ದಾರೆ. ಇದ್ರಿಂದ ತಂಡದಲ್ಲಿ ಯಾರ ಸ್ಥಾನವೂ ಖಚಿತವಿಲ್ಲ.
ಸದ್ಯದ ಪರಿಸ್ಥಿತಿಯನ್ನು ನೋಡಿದ್ರೆ, ಒಬ್ಬ ಆಟಗಾರ ಗಾಯಗೊಂಡ್ರೆ, ಅಥವಾ ಕಳಪೆ ಪ್ರದರ್ಶನ ನೀಡಿದ್ರೆ ಆತ ಮತ್ತೆ ತಂಡದಲ್ಲಿ ಸ್ಥಾನ ಪಡೆಯುತ್ತಾನೆ ಅನ್ನೋ ಸಂದೇಹ ಕೂಡ ಕಾಡುತ್ತಿದೆ.
ಉದಾಹರಣೆಗೆ ರವೀಂದ್ರ ಜಡೇಜಾ.. ಆಸ್ಟ್ರೇಲಿಯಾ ಸರಣಿಯ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ತಂಡದಿಂದ ಹೊರಗುಳಿದಿದ್ದರು. ಆಗ ಅವರ ಸ್ಥಾನ ತುಂಬಲು ವಾಷಿಂಗ್ಟನ್ ಸುಂದರ್ ಒಂದು ಕಡೆಯಾದ್ರೆ, ಅಕ್ಸರ್ ಪಟೇಲ್ ಮತ್ತೊಂದು ಕಡೆ. ಸಿಕ್ಕ ಅವಕಾಶವನ್ನು ಇಬ್ಬರು ಆಟಗಾರರು ಬಾಚಿಕೊಂಡಿದ್ದಾರೆ. ಜೊತೆಗೆ ಕುಲದೀಪ್ ಯಾದವ್ ಸ್ಥಾನಕ್ಕೂ ಕುತ್ತು ಬಂದಿದೆ.
ಇನ್ನು ಮಯಾಂಕ್ ಅಗರ್ ವಾಲ್ ಮತ್ತು ಕೆ.ಎಲ್. ರಾಹುಲ್ ತಂಡದ 15ರ ಬಳಗದಲ್ಲಿ ಕಾಣಿಸಿಕೊಂಡ್ರೂ 11 ರ ಬಳಗದಲ್ಲಿ ಅವಕಾಶ ಸಿಗುತ್ತಿಲ್ಲ. ಪೃಥ್ವಿ ಶಾ ಅವರ ಕಳಪೆ ಫಾರ್ಮ್ ನಿಂದಾಗಿ ಟೀಮ್ ಇಂಡಿಯಾದಿಂದ ಹೊರ ನಡೆದಿದ್ದರು. ಇದೀಗ ದೇಶಿ ಪಂದ್ಯದಲ್ಲಿ ರನ್ ದಾಖಲಿಸಿ ಫಾರ್ಮ್ ಕಂಡುಕೊಂಡಿದ್ದಾರೆ.
ಅದೇ ರೀತಿ ಶುಬ್ಮನ್ ಗಿಲ್.. ಆರಂಭದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಸಾಕಷ್ಟು ಭರವಸೆ ಮೂಡಿಸಿದ್ದರು. ಆದ್ರೆ ಗಿಲ್ ಈಗ ನಿರೀಕ್ಷಿತ ಮಟ್ಟದ ಪ್ರದರ್ಶನ ಹೊರಬರುತ್ತಿಲ್ಲ.
ಮತ್ತೊಂದೆಡೆ, ಅನುಭವಿ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಬ್ಯಾಟ್ ನಿಂದ ಕೂಡ ರನ್ ಗಳು ಹರಿದು ಬರುತ್ತಿಲ್ಲ. ಹೀಗಾಗಿ ಇವರಿಬ್ಬರು ಕೂಡ ಡೇಂಜರ್ ಝೋನ್ ನಲ್ಲಿದ್ದಾರೆ. ಯಾಕಂದ್ರೆ ಟೀಮ್ ಇಂಡಿಯಾದಿಂದ ಒಂದು ಬಾರಿ ಹೊರ ನಡೆದ್ರೆ ಮತ್ತೆ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪರದಾಟ ನಡೆಸಬೇಕಾಗುತ್ತದೆ.
ಈ ನಡುವೆ, ವಿಜಯ ಹಜಾರೆ ಟೂರ್ನಿ, ಐಪಿಎಲ್ ಟೂರ್ನಿಯಲ್ಲೂ ಯುವ ಆಟಗಾರರು ತಾವೇನೂ ಕಮ್ಮಿ ಇಲ್ಲ ಎಂಬಂತೆ ಅಬ್ಬರಿಸುತ್ತಿದ್ದಾರೆ.
ಏತನ್ಮಧ್ಯೆ ಬೌಲಿಂಗ್ ವಿಭಾಗದಲ್ಲೂ ಸಾಕಷ್ಟು ಪೈಪೋಟಿ ಕಂಡು ಬರುತ್ತಿದೆ. ಯುವ ಬೌಲರ್ ಗಳು ಕೂಡ ಮಾರಕವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಇದ್ರಿಂದ ಟೀಮ್ ಇಂಡಿಯಾದಲ್ಲಿ ಯಾರ ಸ್ಥಾನವೂ ಸ್ಥಿರ ಅಂತ ಹೇಳುವ ಹಾಗಿಲ್ಲ.
ಒಟ್ಟಿನಲ್ಲಿ ಭವಿಷ್ಯದ ಟೀಮ್ ಇಂಡಿಯಾದಲ್ಲಿ ಕನಿಷ್ಠ ಐದು ವರ್ಷ ಆಡುವುದೇ ದೊಡ್ಡ ಸಾಧನೆಯಾದ್ರೂ ಆಗಬಹುದು. ಆದ್ರೆ ಆ ಐದು ವರ್ಷ ಆಡಲು ಪ್ರತಿಯೊಬ್ಬ ಆಟಗಾರರು ಬದ್ಧತೆ, ಪರಿಶ್ರಮಪಡಬೇಕಾಗುತ್ತೆ. ಸ್ವಲ್ಪ ಯಾಮಾರಿದ್ರೂ ತಂಡದಲ್ಲಿ ಸ್ಥಾನ ಸಿಗಲ್ಲ. ಪ್ರತಿಭೆ ಕಮರಿ ಹೋಗಬಹುದು ಜಾಗ್ರತೆ ಇರಲಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd