ಡ್ರ್ಯಾಗನ್ ದೇಶದ ಮೇಲೆ ಮತ್ತೊಂದು ಆಸ್ತ್ರ ಪ್ರಯೋಗಿಸಲು ಭಾರತ ಸಜ್ಜು – ಚೀನೀ ರೇಷ್ಮೆ ಸೀರೆ ನಿಷೇಧಿಸಲು ಕೇಂದ್ರ ಚಿಂತನೆ
ಹೊಸದಿಲ್ಲಿ, ಸೆಪ್ಟೆಂಬರ್09: ಡ್ರ್ಯಾಗನ್ ದೇಶದೊಂದಿಗೆ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯ ಮಧ್ಯೆ, ಜನಪ್ರಿಯ ಮೊಬೈಲ್ ಗೇಮ್ ಪಬ್ ಜಿ ಸೇರಿದಂತೆ ವಿವಿಧ ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸಿದ ನಂತರ ಭಾರತ ಇದೀಗ ತನ್ನ ಶಸ್ತ್ರಾಗಾರದಿಂದ ಮತ್ತೊಂದು ಆಸ್ತ್ರವನ್ನು ಪ್ರಯೋಗಿಸಲು ಯೋಚಿಸುತ್ತಿದೆ.
ಚೀನಾದಿಂದ ಆಮದಾಗುವ ಅಗ್ಗದ ಬನಾರಸಿ ರೇಷ್ಮೆ ಸೀರೆಗಳ ಗುಣಮಟ್ಟ ಕ್ಷೀಣಿಸುತ್ತಿದೆ ಎಂದು ಜವಳಿ ಸಚಿವಾಲಯದ ಅಧಿಕಾರಿಗಳು ಕಾರ್ಮಿಕರ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಚೀನಾದ ರೇಷ್ಮೆ ಸೀರೆಗಳ ಆಮದಿಗೆ ನಿರ್ಬಂಧ ಹೇರಲು ಚಿಂತನೆ ನಡೆಸಿದೆ ಎಂದು ಮೂಲಗಳು ಉಲ್ಲೇಖಿಸಿದೆ. ಚೀನಾದಿಂದ ರೇಷ್ಮೆ ಸೀರೆ ಆಮದನ್ನು ನಿರ್ಬಂಧಿಸುವ ಕ್ರಮಗಳನ್ನು ಕೇಂದ್ರವು ಈಗ ಆಲೋಚಿಸುತ್ತಿದೆ ಎಂದು ಅಧಿಕಾರಿಗಳು ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದ್ದಾರೆ. ಕಾರ್ಮಿಕರ ಸ್ಥಾಯಿ ಸಮಿತಿಯ ಸಭೆಯಲ್ಲಿ ಸೋಮವಾರ ಕೇಂದ್ರ ಸರ್ಕಾರದ ಯೋಜನೆಗಳನ್ನು ತಿಳಿಸಲಾಯಿತು. ಸಮಿತಿಯು ‘ಸವಾಲುಗಳು ಮತ್ತು ಅವಕಾಶಗಳು – ಭಾರತೀಯ ಜವಳಿ ಉದ್ಯಮ’ ಎಂಬ ವಿಷಯದ ಬಗ್ಗೆ ಚರ್ಚಿಸಿದೆ ಎಂದು ಮೂಲವೊಂದು ವರದಿ ಮಾಡಿದೆ. ಸಚಿವಾಲಯವು ಶೀಘ್ರದಲ್ಲೇ ಈ ಕ್ರಮವನ್ನು ಪ್ರಕಟಿಸಲಿದೆ ಎಂದು ವರದಿಯಾಗಿದೆ.
ಚೀನಾ ವಿರೋಧಿ ಭಾವನೆ ಕೂಡ ಬಲಗೊಂಡಿರುವುದರಿಂದ ಕೇಂದ್ರ ಸರ್ಕಾರವು ಸಾಂಕ್ರಾಮಿಕದ ಮಧ್ಯೆ ಕೆಲವು ಸಮಯದಿಂದಲೂ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ರಫ್ತು ಕಡಿತಗೊಳಿಸಲು ಮುಂದಾಗಿದೆ. ಈಗಾಗಲೇ ಮೇಕ್ ಇನ್ ಇಂಡಿಯಾಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭಾರ ಭಾರತ್ ಮತ್ತು ಸ್ಥಳೀಯ ಉತ್ಪಾದನೆಗೆ ಪ್ರೋತ್ಸಾಹ ನೀಡಿ, ವಿದೇಶಿ ಉತ್ಪನ್ನಗಳನ್ನು ಕಡಿಮೆ ಮಾಡಿ, ರಫ್ತಿಗೆ ಗಮನ ಕೊಡಿ ಎಂದು ಕರೆ ನೀಡಿದ್ದಾರೆ.
ಏತನ್ಮಧ್ಯೆ, ಆಮದುಗಳನ್ನು ನಿಗ್ರಹಿಸಲು ಮತ್ತು ಭಾರತದಿಂದ ತಯಾರಿಸಿದ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ವಾಸ್ತವವಾಗಿ, ದೇಶೀಯ ಕಂಪನಿಗಳನ್ನು ಪತ್ತೆ ಹಚ್ಚಲು ನೆರವಾಗುವಂತೆ ತಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಪಟ್ಟಿ ಮಾಡಲಾದ ಉತ್ಪನ್ನಗಳಿಗೆ ಪ್ರಮುಖವಾಗಿ ‘ಕಂಟ್ರಿ ಆಫ್ ಒರಿಜಿನ್’ ಟ್ಯಾಗ್ ಅನ್ನು ಪ್ರದರ್ಶಿಸಲು ಇ-ಕಾಮರ್ಸ್ ಕಂಪನಿಗಳಿಗೆ ನಿರ್ದೇಶನ ನೀಡುವಂತಹ, ಆಮದುಗಳನ್ನು ಕಡಿತಗೊಳಿಸುವ ವಿಧಾನಗಳನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ. ಇದಲ್ಲದೆ, ಇತರ ದೇಶಗಳು ಸಹ ಚೀನಾದಿಂದ ಜವಳಿ ಖರೀದಿಗೆ ಸಂಬಂಧಿಸಿದಂತೆ ತಮ್ಮ ಕಳವಳವನ್ನು ವ್ಯಕ್ತಪಡಿಸಿವೆ. ಅಮೆರಿಕ ಕೂಡ ಇಷ್ಟರಲ್ಲೇ ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಿಂದ ಹತ್ತಿ ಆಮದು ನಿಷೇಧವನ್ನು ಘೋಷಿಸುವ ಸಾಧ್ಯತೆಯಿದೆ.