ಭಾರತದ ನಂಬರ್ 1 ಟೆನಿಸ್ ಸ್ಟಾರ್ ಸುಮಿತ್ ನಗಾಲ್ ಫ್ರಾನ್ಸ್ನ ಮಾಂಟೆ ಕಾರ್ಲೊದಲ್ಲಿ ನಡೆದ ಎಟಿಪಿ ಮಾಸ್ಟರ್ಸ್ ಕ್ಲೇಕೋರ್ಟ್ ಟೂರ್ನಿಯಲ್ಲಿ ವಿಶ್ವದ 38ನೇ ಶ್ರೇಯಾಂಕದ ಮ್ಯಾಟಿಯೊ ಅರ್ನಾಲ್ಡಿ ಅವರನ್ನು ಸೋಲಿಸುವ ಮೂಲಕ ಮುಖ್ಯ ಡ್ರಾ ಸಿಂಗಲ್ಸ್ ಪಂದ್ಯ ಗೆದ್ದು ಇತಿಹಾಸ ಬರೆದಿದ್ದಾರೆ.
ಅಲ್ಲದೇ, ಈ ಪಂದ್ಯ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ. ನಗಾಲ್, ತಮ್ಮ ಇಟಾಲಿಯನ್ ಎದುರಾಳಿ ಮ್ಯಾಟಿಯೊ ಅರ್ನಾಲ್ಡಿ ಅವರನ್ನು 5-7, 6-2, 6-4 ಸೆಟ್ಗಳಿಂದ ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಮೊದಲ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ ನಗಾಲ್, ನಂತರ 6-2, 6-4 ರಿಂದ ಗೆಲ್ಲುವ ಮೂಲಕ ಪಂದ್ಯ ಗೆದ್ದಿದ್ದಾರೆ. ನಗಾಲ್ ಮುಂದಿನ ಸುತ್ತಿನಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ ಏಳನೇ ಸ್ಥಾನದಲ್ಲಿರುವ ಡೆನ್ಮಾರ್ಕ್ನ ಹೊಲ್ಗರ್ ರೂನ್ ರನ್ನು ಎದುರಿಸಲಿದ್ದಾರೆ.
ಮ್ಯಾಟಿಯೊ ಅರ್ನಾಲ್ಡಿ ಅವರನ್ನು ಮಣಿಸುವುದರೊಂದಿಗೆ ನಗಾಲ್ ಅಗ್ರ 50 ರೊಳಗಿನ ಶ್ರೇಯಾಂಕಿತ ಆಟಗಾರನನ್ನು ಸೋಲಿಸಿದ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು ನಗಾಲ್, ಈ ಸೀಸನ್ ಆರಂಭದಲ್ಲಿ ಮೆಲ್ಬೋರ್ನ್ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ನಲ್ಲಿ ವಿಶ್ವದ 27 ನೇ ಶ್ರೇಯಾಂಕದ ಅಲೆಕ್ಸಾಂಡರ್ ಬುಬ್ಲಿಕ್ ರನ್ನು ಸೋಲಿಸಿದ್ದರು. 2021 ರಲ್ಲಿ ನಗಾಲ್ ವಿಶ್ವದ 22ನೇ ಶ್ರೇಯಾಂಕದಲ್ಲಿದ್ದ ಚಿಲಿಯ ಕ್ರಿಸ್ಟಿಯನ್ ಗ್ಯಾರಿನ್ ರನ್ನು ಸೋಲಿಸಿದ್ದರು. ಎಟಿಪಿ ಮಾಸ್ಟರ್ಸ್ ಕ್ಲೇಕೋರ್ಟ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ನಾಗಲ್ 63ನೇ ಶ್ರೇಯಾಂಕದ ಇಟಲಿಯ ಫ್ಲಾವಿಯೊ ಕೊಬೊಲಿ, 55ನೇ ಶ್ರೇಯಾಂಕದ ಅರ್ಜೆಂಟೀನಾದ ಡಯಾಜ್ ಅಕೋಸ್ಟಾರನ್ನು ಸೋಲಿಸಿ ಪಂದ್ಯಾವಳಿಗೆ ಅರ್ಹತೆ ಗಿಟ್ಟಿಸಿದ್ದರು.