ಕೊರೊನಾಗೆ ರೈಲ್ವೇ ಇಲಾಖೆಯ 1,952 ರೈಲ್ವೇ ಉದ್ಯೋಗಿಗಳು ಬಲಿ..!
ನವದೆಹಲಿ: ದೇಶದಲ್ಲಿ ಕೋವಿಡ್ 2ನೇ ಅಲೆ ಭಯಾನಕ ಸ್ವರೂಪ ಪಡೆದಿದ್ದು, ಸೋಂಕಿತರು ಹಾಗೂ ದಿನೇ ದಿನೇ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ. ಈ ನಡುವೆ ರೈಲ್ವೇ ಇಲಾಖೆಯ ಸಾವಿರಾರು ಉದ್ಯೋಗಿಗಳು ಕೊರೊನಾ ಮಹಾಮಾರಿಗೆ ಜೀವ ಕಳೆದುಕೊಂಡಿದ್ದಾರೆ. ಕೋವಿಡ್ 19 ಸೋಂಕಿನಿಂದ 1,952 ಉದ್ಯೋಗಿಗಳನ್ನು ಕಳೆದುಕೊಂಡಿರುವುದಾಗಿ ರೈಲ್ವೇ ಇಲಾಖೆ ತಿಳಿಸಿದೆ.
ನಮ್ಮದು ವಾಣಿಜ್ಯ ಉದ್ದೇಶದ ಸಾರಿಗೆ ವ್ಯವಸ್ಥೆ. ನಾವು ಸರಕು ಮತ್ತು ಜನರನ್ನು ಸಾಗಿಸುತ್ತೇವೆ. ಹೀಗೆ ದಿನಂಪ್ರತಿ ಒಂದು ಸಾವಿರ ಕೋವಿಡ್ 19 ಸೋಂಕು ಪ್ರಕರಣ ವರದಿಯಾಗುತ್ತಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದ್ದಾರೆ.
ಇನ್ನೂ ನಮ್ಮಲ್ಲಿ ಆಸ್ಪತ್ರೆಗಳಿವೆ, ನಾವು ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೇವೆ, ರೈಲ್ವೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲ್ಯಾಂಟ್ ಸಿದ್ದಪಡಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವು ನಮ್ಮ ಸಿಬಂದಿಗಳ ಸುರಕ್ಷತೆ ಬಗ್ಗೆ ಒತ್ತು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಭಾರತದಲ್ಲಿಂದು ಕೊರೊನಾ ಅಬ್ಬರ ತುಸು ಕಗ್ಗಿದಂತೆ ಕಾಣುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3,29,942 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕಳೆದೊಂದು ವಾರಕ್ಕೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,29,942 ಕೋವಿಡ್ ಕೇಸ್ ಗಳು ಪತ್ತೆಯಾಗಿದ್ದು,
3,876 ಮಂದಿ ಮಾರಕ ಸೋಂಕಿನಿಂದ ಉಸಿರು ನಿಲ್ಲಿಸಿದ್ದಾರೆ.
ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 2,29,92,517 ಹಾಗೂ ಮೃತರ ಸಂಖ್ಯೆ 2,49,992ಕ್ಕೆ ಹೆಚ್ಚಳವಾಗಿದೆ. ಇನ್ನು ನಿನ್ನೆ ಒಂದೇ ದಿನ 3,56,082 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 1,90,27,304 ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಭಾರತದಲ್ಲೀಗ 37,15,221 ಕೊರೊನಾ ಕೇಸ್ ಗಳು ಸಕ್ರಿಯವಾಗಿವೆ.








