ಏಷ್ಯನ್ ಫುಟ್ ಬಾಲ್ ಫೆಡರೇಷನ್ ಚಾಂಪಿಯನ್ಶಿಪ್ನ ಸೆಮಿಫೈನಲ್ ನಲ್ಲಿ ಭಾರತೀಯ ತಂಡವು ಲೆಬನಾನ್ ವಿರುದ್ಧ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆಯಿಟ್ಟಿದೆ.
ನಿಗದಿತ ಸಮಯದೊಳಗೆ ಗೋಲು ದಾಖಲಾಗದ ಹಿನ್ನೆಲೆಯಲ್ಲಿ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟ್ಔಟ್ನ ಮೊರೆ ಹೋಗಬೇಕಾಯಿತು. ಪೆನಾಲ್ಟಿ ಶೂಟೌಟ್ನಲ್ಲಿ 4-2 ಅಂತರದಿಂದ ಭಾರತ ತಂಡವು ಗೆಲುವು ಸಾಧಿಸಿ ಪೈನಲ್ ಗೆ ತೆರಳಿತು. ಈ ಪಂದ್ಯವು ಭಾರೀ ಜಿದ್ದಾಜಿದ್ದಿನಿಂದ ಕೂಡಿತ್ತು. ಆರಂಭದಿಂದಲೇ ಚೆಂಡಿನ ಮೇಲೆ ಹಿಡಿತ ಸಾಧಿಸುವಲ್ಲಿ ಭಾರತೀಯ ಆಟಗಾರರು ಯಶಸ್ವಿಯಾಗಿದ್ದರು. ಆದರೆ ಲೆಬನಾನ್ ರಕ್ಷಣಾ ಬೇಲಿಯನ್ನು ಭೇದಿಸಿ ಗೋಲುಗಳಿಸಲು ಸಾಧ್ಯವಾಗಲೇ ಇಲ್ಲ.
ಪರಿಣಾಮ ಭಾರತ ತಂಡವು ಮೊದಲಾರ್ಧದಲ್ಲಿ ಗುರಿಯತ್ತ ಚೆಂಡನ್ನು ಬಾರಿಸಿದ್ದು ಕೇವಲ 2 ಬಾರಿ ಮಾತ್ರ. ಅತ್ತ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದ್ದ ಲೆಬನಾನ್ ಅತ್ಯುತ್ತಮ ಪಾಸ್ಗಳ ಮೂಲಕ ಭಾರತದ ಗೋಲಿನತ್ತ ದಾಳಿ ಮಾಡುವ ಪ್ರಯತ್ನ ಮಾಡಿದ್ದರು. ಭಾರತ ಪ್ರತಿರೋಧ ನೀಡಿತು.
ಸೆಕೆಂಡ್ ಹಾಫ್ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಟೀಮ್ ಇಂಡಿಯಾ ಪರ ನಾಯಕ ಸುನಿಲ್ ಛೆಟ್ರಿ, ಸಹಾಲ್ ಸಮದ್ ಹಾಗೂ ಆಶಿಕ್ ಅತ್ಯುತ್ತಮ ಆಟ ಪ್ರದರ್ಶಿಸಿದರು. ಇನ್ನೊಂದೆಡೆ ಲೆಬನಾನ್ ಪರ ಅತ್ಯುತ್ತಮ ಡಿಫೆನ್ಸ್ ಪ್ರದರ್ಶಿಸಿದ ಶೌರ್ ಹಾಗೂ ಮೆಲ್ಕಿಯನ್ನು ವಂಚಿಸಿ ಚೆಂಡನ್ನು ಬಲೆಯೊಳಗೆ ತಲುಪಿಸುವಲ್ಲಿ ಎಡವಿದರು. ಪರಿಣಾಮ ದ್ವಿತಿಯಾರ್ಧದಲ್ಲೂ ಕೂಡ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಹೀಗಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು. ಪೆನಾಲ್ಟಿ ಶೂಟೌಟ್ನಲ್ಲಿ ಪ್ರಥಮ ಗೋಲು ದಾಖಲಿಸಿ ಸುನಿಲ್ ಛೆಟ್ರಿ ಮೊದಲ ಯಶಸ್ಸು ತಂದುಕೊಟ್ಟರು. ಜುಲೈ 4 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಹಾಗೂ ಕುವೈತ್ ತಂಡಗಳು ಸೆಣಸಾಟ ನಡೆಸಲಿವೆ.








