ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತೀಯ ಆಟಗಾರ್ತಿ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಮಹಿಳೆಯರ ಪ್ರೀಸ್ಟೈಲ್ 50 ಕೆಜಿ ಸೆಮಿಫೈನಲ್ ನಲ್ಲಿ ಐತಿಹಾಸಿಕ ಗೆಲುವು ದಾಖಲಿಸುವ ಮೂಲಕ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಒಲಿಂಪಿಕ್ಸ್ ಪದಕ ಗೆಲ್ಲುವುದನ್ನು ಖಚಿತ ಮಾಡಿದ್ದಾರೆ.
ಮಂಗಳವಾರ ನಡೆದ ಕುಸ್ತಿ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಸೆಮಿಫೈನಲ್ ಗೆಲುವು ಫೋಗಾಟ್ ಗೆ ಬೆಳ್ಳಿ ಪದಕ ಖಚಿತ ಪಡಿಸಿದ್ದರೂ ಚಿನ್ನ ಗೆಲ್ಲುವಲ್ಲಿ ವಿನೇಶ್ ಯಶಸ್ವಿಯಾಗಲಿ ಎಂದು ಇಡೀ ಭಾರತ ಹಾರೈಸುತ್ತಿದೆ. ಭಾರತದ ಪ್ರಮುಖ ಕುಸ್ತಿಪಟು ಫೈನಲ್ ನಲ್ಲಿ ಚಿನ್ನದ ಗುರಿಯನ್ನು ಹೊಂದಿದ್ದಾರೆ. ಫೋಗಾಟ್ ಕೊನೆಯ-ಎಂಟನೇ ಹಂತದಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್ ರನ್ನು ಸೋಲಿಸಿದ್ದರು. ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಮತ್ತು ಹಾಲಿ ಚಿನ್ನದ ಪದಕ ವಿಜೇತ ಜಪಾನ್‌ನ ಯುಯಿ ಸುಸಾಕಿ ಅವರನ್ನೂ ಮಣಿಸಿ, ಸೆಮಿಫೈನಲ್ ಪ್ರವೇಶಿಸಿದ್ದರು. ಘಟಾನುಘಟಿಗಳನ್ನು ಬಗ್ಗು ಬಡಿದ ವಿನೇಶ್ ಬಂಗಾರ ಗೆಲ್ಲಲಿ ಎನ್ನುವುದು ಭಾರತೀಯರ ಹಾರೈಕೆಯಾಗಿದೆ.