ಡೈಮರ್-ಭಾಷಾ ಅಣೆಕಟ್ಟು ನಿರ್ಮಾಣಕ್ಕೆ ಭಾರತದ ಆಕ್ಷೇಪ
ಹೊಸದಿಲ್ಲಿ, ಜುಲೈ 17: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನದ ಚಿಲಾಸ್ ನ ಸಿಂಧೂ ನದಿಯಲ್ಲಿ ಡೈಮರ್ ಬಾಷಾ ಅಣೆಕಟ್ಟು ನಿರ್ಮಿಸುವ ಇಸ್ಲಾಮಾಬಾದ್ ನಿರ್ಧಾರವನ್ನು ಭಾರತ ಖಂಡಿಸಿದೆ, ಇದು ಜಮ್ಮುಕಾಶ್ಮೀರ ಮತ್ತು ಲಡಾಖ್ ನ ಹೆಚ್ಚಿನ ಭಾಗಗಳನ್ನು ಮುಳುಗಿಸುವುದಾಗಿ ಹೇಳಿದೆ.
ಪಾಕಿಸ್ತಾನ ಸರ್ಕಾರವು ಡೈಮರ್ ಬಾಷಾ ಅಣೆಕಟ್ಟು ನಿರ್ಮಿಸುವುದನ್ನು ಭಾರತ ತೀವ್ರವಾಗಿ ಪ್ರತಿಭಟಿಸಿದ್ದು, ಇದು ಜಮ್ಮು ಕಾಶ್ಮೀರ ಮತ್ತು ಲಡಾಖ್ನ ಹೆಚ್ಚಿನ ಭಾಗವನ್ನು ಮುಳುಗಿಸಲು ಕಾರಣವಾಗುತ್ತದೆ. ಪಾಕ್ ಭಾರತದ ಭೂಪ್ರದೇಶಗಳಲ್ಲಿ ಭೌತಿಕ ಬದಲಾವಣೆ ತರಲು ಮಾಡಿದ ಪ್ರಯತ್ನಗಳನ್ನು ನಾವು ಖಂಡಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ಅಧಿಕೃತ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರ ಹೇಳಿದ್ದಾರೆ.
ಚೀನಾ ಬೆಂಬಲಿತ ಬೃಹತ್ ಯೋಜನೆಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದರೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಡೈಮರ್-ಭಾಷಾ ಅಣೆಕಟ್ಟು ನಿರ್ಮಾಣವನ್ನು ಬುಧವಾರ ಉದ್ಘಾಟಿಸಿದರು.
ಡೈಮರ್-ಭಾಷಾ ಪಾಕಿಸ್ತಾನದ ಮೂರನೇ ಅತಿದೊಡ್ಡ ಅಣೆಕಟ್ಟು ಆಗಲಿದ್ದು, 4,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಕನಿಷ್ಠ 16,000 ಉದ್ಯೋಗಗಳನ್ನು ಒದಗಿಸುತ್ತದೆ ಎಂದು ಖಾನ್ ಹೇಳಿದ್ದಾರೆ. ಅಣೆಕಟ್ಟು 2028 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.