ಭಾರತ ತಂಡ ಕೊನೆಯ ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದು, ಅದರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೋತಿರುವ ಭಾರತ ತಂಡಕ್ಕೆ WTC ಫೈನಲ್ಗೆ ಪ್ರವೇಶಿಸಲು ಶ್ರೀಲಂಕಾ ತಂಡದ ಆಶ್ರಯ ಬೇಕಾಗಿದೆ. ಆದರೆ ಅದಕ್ಕೂ ಮುನ್ನ ಸಿಡ್ನಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲೇಬೇಕಿದೆ.
ಭಾರತ ತಂಡವು ಸದ್ಯ 52.78% ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, 61.46% ಪಾಯಿಂಟ್ಸ್ನೊಂದಿಗೆ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. 66.67% ಅಂಕಗಳಿಸಿರುವ ಸೌತ್ ಆಫ್ರಿಕಾ ತಂಡ ಈಗಾಗಲೇ ಫೈನಲ್ಗೆ ಅರ್ಹತೆ ಪಡೆದಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ರೇಸ್ ಮುಂದುವರೆದಿದೆ.
ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ, 55.26% ಅಂಕಗಳನ್ನು ಪಡೆಯಲಿದೆ. ಇದೇ ವೇಳೆ ಆಸ್ಟ್ರೇಲಿಯಾ ತಂಡದ ಅಂಕ 57.84% ಕ್ಕೆ ಕುಸಿಯಲಿದೆ. ಆಗ ಭಾರತ ತಂಡವು ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಎದುರು ನೋಡಬೇಕಿದೆ.
ಈ ಸರಣಿಯ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ತಂಡವು ಒಂದು ಜಯ ಹಾಗೂ ಒಂದು ಡ್ರಾ ಅಥವಾ ಎರಡು ಪಂದ್ಯಗಳಲ್ಲೂ ಗೆಲುವು ದಾಖಲಿಸಿದರೆ ಭಾರತ ತಂಡವು ಫೈನಲ್ ಪ್ರವೇಶ ಮಾಡಲಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ಗೆದ್ದರೆ, ಭಾರತ ಫೈನಲ್ ರೇಸ್ ನಿಂದ ಹಿಂದೆ ಉಳಿಯಲಿದೆ.








