ಹರಾರೆ: ಬ್ಯಾಟಿಂಗ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ರುದ್ರತಾಂಡವ ಹಾಗೂ ಬೌಲಿಂಗ್‌ನಲ್ಲಿ ಆರ್ ಎಸ್ ಅಂಬರೀಶ್ ಅವರ ಚಾಕಚಕ್ಯತೆಯಿಂದಾಗಿ, ಇಂಗ್ಲೆಂಡ್ ವಿರುದ್ಧ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತದ ಅಂಡರ್ 19 ತಂಡವು ಐತಿಹಾಸಿಕ ಜಯ ದಾಖಲಿಸಿದೆ. ಈ ಮೂಲಕ ಟೀಮ್ ಇಂಡಿಯಾ ಆರನೇ ಬಾರಿಗೆ ಅಂಡರ್ 19 ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡು ದಾಖಲೆ ಬರೆದಿದೆ.
ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟಾಸ್ ಗೆದ್ದ ಭಾರತದ ಕಿರಿಯರ ತಂಡದ ನಾಯಕ ಆಯುಷ್ ಮ್ಹಾತ್ರೆ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಘಾತದ ನಡುವೆಯೂ ಕ್ರೀಸ್ ಕಚ್ಚಿ ನಿಂತ ಭಾರತೀಯ ಬ್ಯಾಟರ್‌ಗಳು ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.
ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್
ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದು ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್. ಕ್ರೀಸ್‌ಗೆ ಇಳಿದ ಕ್ಷಣದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸೂರ್ಯವಂಶಿ, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ 55 ಎಸೆತಗಳಲ್ಲಿ ಶತಕ ಪೂರೈಸಿದ ಅವರು 2ನೇ ಅತೀ ವೇಗದ ಶತಕದ ದಾಖಲೆ ಬರೆದರು.
ಶತಕದ ಬಳಿಕವೂ ತಮ್ಮ ಅಬ್ಬರ ನಿಲ್ಲಿಸದ ವೈಭವ್, ಕೇವಲ 80 ಎಸೆತಗಳಲ್ಲಿ ಬರೋಬ್ಬರಿ 15 ಬೌಂಡರಿ ಹಾಗೂ 15 ಮುಗಿಲೆತ್ತರದ ಸಿಕ್ಸರ್ಗಳ ನೆರವಿನಿಂದ 175 ರನ್ ಸಿಡಿಸಿ ಔಟಾದರು. ಇದು ಅಂಡರ್ 19 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಬ್ಯಾಟರ್ ಒಬ್ಬರು ಗಳಿಸಿದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ.
ನಾಯಕ ಆಯುಷ್ ಮ್ಹಾತ್ರೆ, ವೇದಾಂತ್ ತ್ರಿವೇದಿ (32), ವಿಹಾನ್ (30), ಕುಂದು (40) ಹಾಗೂ ಕನಿಷ್ಕಾ ಚೌಹಾಣ್ (37) ಅವರ ಸಮಯೋಚಿತ ಆಟದ ನೆರವಿನಿಂದ ಭಾರತ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 412 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.
ಹೋರಾಡಿ ಸೋತ ಇಂಗ್ಲೆಂಡ್
412 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಬೆನ್ ಡಾಕಿನ್ಸ್ (66) ಮತ್ತು ಬೆನ್ ಮೇಯಸ್ (45) ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಕ್ಯಾಲೆಭ್ ಫಾಲ್ಕನರ್ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 67 ಎಸೆತಗಳಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಮೂಲಕ 115 ರನ್ ಬಾರಿಸಿ ಶತಕದ ಸಂಭ್ರಮ ಆಚರಿಸಿದರು.
ಅಂಬರೀಶ್ ಚುರುಕಿನ ಬೌಲಿಂಗ್ ದಾಳಿ
ಆದರೆ, ಭಾರತದ ವೇಗಿ ಆರ್ ಎಸ್ ಅಂಬರೀಶ್ ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ಮುಂದೆ ಇಂಗ್ಲೆಂಡ್ ಬ್ಯಾಟರ್‌ಗಳು ಮಂಕಾದರು. ಅಂಬರೀಶ್ ಪ್ರಮುಖ 3 ವಿಕೆಟ್ ಕಬಳಿಸಿ ಎದುರಾಳಿಗಳ ರನ್ ವೇಗಕ್ಕೆ ಲಗಾಮು ಹಾಕಿದರು. ಫಾಲ್ಕನರ್ ಔಟಾಗುತ್ತಿದ್ದಂತೆಯೇ ಕುಸಿತ ಕಂಡ ಇಂಗ್ಲೆಂಡ್ ತಂಡ, ಇನ್ನೂ 10 ಓವರ್‌ಗಳು ಬಾಕಿ ಇರುವಂತೆಯೇ 311 ರನ್‌ಗಳಿಗೆ ಆಲೌಟ್ ಆಯಿತು.
ಅಂತಿಮವಾಗಿ ಭಾರತದ ಯುವ ಪಡೆ 100 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿ, ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂಭ್ರಮದ ಉಡುಗೊರೆ ನೀಡಿತು.








