ಶೀಘ್ರದಲ್ಲೇ ಕೆಜಿಎಫ್ ನಲ್ಲಿ ಕೈಗಾರಿಕಾ ಹಬ್
ಬೆಂಗಳೂರು : ಚಿನ್ನದ ನಾಡು ಕೋಲಾರ ಜಿಲ್ಲೆಯ ಕೆಜಿಎಫ್ ನಲ್ಲಿ ಶೀಘ್ರದಲ್ಲೇ ಕೈಗಾರಿಕಾ ಹಬ್ ಪ್ರಾರಂಭಿಸಲು ಸರ್ಕಾರ ತಿರ್ಮಾನಿಸಿದೆ. ಈ ಬಗ್ಗೆ ವಿಧಾನಸಭಾ ಸದನದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಗುರುವಾರ ಸದನದಲ್ಲಿ ಪ್ರಶ್ನೋತ್ತರ ವೇಳೆ ಶಾಸಕಿ ರೂಪಕಲಾ ಪ್ರಶ್ನೆಗೆ ಶೆಟ್ಟರ್ ಉತ್ತರಿಸಿ, ಕೆಜಿಎಫ್ ಸಮೀಪ ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ಹೆದ್ದಾರಿ ಹಾದು ಹೋಗುತ್ತದೆ. ಇಲ್ಲಿ ಕೈಗಾರಿಕಾ ಹಬ್ ಗಳನ್ನು ಪ್ರಾರಂಭ ಮಾಡುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಾಗೆ ಕೆಜಿಎಫ್‍ನಲ್ಲಿರುವ ಬಿಇಎಂಎಲ್ ನವರು 973 ಎಕರೆ ಜಮೀನನ್ನು ಉಪಯೋಗಿಸಿಕೊಂಡಿಲ್ಲ. ಇದೇ ರೀತಿ ಬಿಇಎಂಎಲ್ ನವರು 3212 ಎಕರೆ ಜಮೀನನ್ನು ಉಪಯೋಗಿಸದೇ ಬಿಟ್ಟಿದ್ದಾರೆ .ಈ ಎಲ್ಲಾ ಜಮೀನನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಬೇಕೆಂದು ಕೇಂದ್ರ ಗಣಿ ಸಚಿವ ಪ್ರಲ್ಹಾದ್ ಜೋಶಿಗೆ ಮನವಿ ಮಾಡಿದ್ದು, ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೀಗ ಈ ಎಲ್ಲಾ ಜಮೀನು ಕೆಐಎಡಿಬಿಗೆ ಹಸ್ತಾಂತರ ಮಾಡಿಕೊಳ್ಳಲಾಗುವುದು. ಇದರಿಂದ ಅನೇಕರಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದರು.









