ಕೊರೋನಾ ಸೋಂಕು ಎದುರಿಸಲು ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ ನೀಡಿರುವ ಮಾಹಿತಿ
ಮಂಗಳೂರು, ಜುಲೈ 24: ಇಂದು ಎಲ್ಲೆಡೆಯೂ ಕೊರೋನಾ ಬಗ್ಗೆಯೇ ಮಾತು. ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಸಹಜವಾಗಿಯೇ ಆತಂಕಿತರಾಗಿದ್ದಾರೆ. ಕೊರೋನಾ ಬಗ್ಗೆಗಿನ ಅಂತೆ ಕಂತೆಗಳಿಂದ ಈ ಸೋಂಕಿಗೆ ಮನುಕುಲವೇ ಕೊನೆಯಾಗುತ್ತದೋ ಎಂಬ ಭಯ ಕೂಡ ಸಮಾಜವನ್ನು ಅವರಿಸಿದೆ. ಖ್ಯಾತ ಹಿರಿಯ ವೈದ್ಯರಾದ ಡಾ.ಬಿ.ಎಂ ಹೆಗ್ಡೆ ಅವರು ಕೊರೊನಾ ಸೋಂಕಿನ ಬಗ್ಗೆ ಮಾತನಾಡಿದ್ದು, ಜನರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಹೇಳಿದ್ದಾರೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ಕೊರೊನಾ ಸೋಂಕಿನಿಂದ ದೂರವಿರಲು ಸಾಧ್ಯ ಎಂದು ಹೇಳಿದ್ದಾರೆ. ಸಕಾರಾತ್ಮಕ ಚಿಂತನೆ, ಮಾನಸಿಕ ನೆಮ್ಮದಿ, ದೇಹವನ್ನು ಸಾಮರ್ಥ್ಯಕ್ಕಿಂತ ಹೆಚ್ಚು ದಂಡಿಸದಿರುವುದು, ನಮ್ಮ ಪ್ರಾಚೀನ ಆಹಾರ ಪದ್ಧತಿ ಮತ್ತು ಎಲ್ಲರನ್ನೂ ಪ್ರೀತಿಸುವ ಗುಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕ ಎಂದು ಹೇಳಿದ್ದಾರೆ.
ಗಂಭೀರ ಸ್ವರೂಪದ ಕಾಯಿಲೆಯನ್ನು ಹೊರತು ಪಡಿಸಿ ಶೀತ, ಜ್ವರ, ಗಂಟಲುನೋವು ಬಂದ ಕೂಡಲೇ ಆಸ್ಪತ್ರೆಗೆ ಹೋಗಿ ಕೊರೋನಾ ಪರೀಕ್ಷೆ ಮಾಡ ಬೇಕಾದ ಅಗತ್ಯವಿಲ್ಲ ಎಂದಿರುವ ಡಾ.ಬಿ.ಎಂ ಹೆಗ್ಡೆ ಮನೆಯಲ್ಲೇ ಮಾಡಬಹುದಾದ ಕೆಲವು ಚಿಕಿತ್ಸೆಗಳನ್ನು ಸೂಚಿಸಿದ್ದಾರೆ.
ಜ್ವರ, ಶೀತ, ಕೆಮ್ಮು, ಗಂಟಲು ನೋವಿಗೆ ಸ್ಟೀಮ್ (ಹಬೆ) ತೆಗೆದು ಕೊಳ್ಳಲು ಸೂಚಿಸಿರುವ ಹಿರಿಯ ವೈದ್ಯರು, ಅದನ್ನು ಹೇಗೆ ಮಾಡುವುದು ಎಂದು ತಿಳಿಸಿಕೊಟ್ಟಿದ್ದಾರೆ.
ಒಂದು ಲೀಟರ್ ನೀರಿಗೆ ಚೆನ್ನಾಗಿ ಜಜ್ಜಿದ ಒಂದು ಇಂಚು ಅರಿಶಿನ ಬೇರಿನ ತುಂಡು(ಹಸಿ ಅಥವಾ ಒಣಗಿದ್ದು), ಜಜ್ಜಿದ 10 ಬೆಳ್ಳುಳ್ಳಿ ಎಸಳು, ಜಜ್ಜಿದ 30 ತುಳಸಿ ಎಲೆಗಳನ್ನು ಸೇರಿಸಿ ಕುದಿಸಿ. ನಂತರ ಆ ಪಾತ್ರೆಗೆ ಮುಖವಿಟ್ಟು ಟವೆಲ್ ಅನ್ನು ಮುಚ್ಚಿ ಅವಿಯನ್ನು ತೆಗೆದುಕೊಳ್ಳಿ. ಈ ರೀತಿ ದಿನಕ್ಕೆ ನಾಲ್ಕು ಬಾರಿ ಮಾಡಿದರೆ ಯಾವುದೇ ಜ್ವರ, ಕೆಮ್ಮು ಶೀತವಿದ್ದರೂ ಗುಣವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ಕಾಡುವ ಗಂಟಲು ಕೆರೆತಕ್ಕೆ ಕೂಡ ಡಾ.ಬಿ.ಎಂ ಹೆಗ್ಡೆ ಮದ್ದನ್ನು ಸೂಚಿಸಿದ್ದು, ಐದು ಕರಿಮೆಣಸುಗಳನ್ನು, ಒಂದು ಕಲ್ಲು ಉಪ್ಪಿನೊಡನೆ ಜಗಿಯಿರಿ. ಹಾಗೇ ಜಗಿಯುತ್ತಾ ನಿಧಾನಕ್ಕೆ ಅದರ ರಸವನ್ನು ನುಂಗುತ್ತಾ ಇರಿ. ಈ ರೀತಿ ರಸವನ್ನು ಸೇವಿಸಿದ ಬಳಿಕ ಒಂದು ಗಂಟೆ
ಕಾಲ ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು. ರಾತ್ರಿ ಊಟದ ಬಳಿಕ ಈ ರೀತಿ ಮಾಡಿದರೆ ಬೆಳಗ್ಗಿನ ಹೊತ್ತಿಗೆ ಗಂಟಲು ಕೆರೆತ ನಿಲ್ಲುವುದಾಗಿ ತಿಳಿಸಿದ್ದಾರೆ. ದಿನಕ್ಕೆ ಎರಡು ಬಾರಿ ಬೆಳಗ್ಗೆ ಮತ್ತು ರಾತ್ರಿ ಈ ರೀತಿ ಮಾಡಲು ಸೂಚಿಸಿರುವ ವೈದ್ಯರು ಗಂಟಲಲ್ಲಿ ವೈರಸ್ ಇದ್ದರೆ ಅದು ಇದರಿಂದ ಸಾಯುವುದಾಗಿ ಹೇಳಿದ್ದಾರೆ.
ಹೊರಗೆ ಸಿಗುವ ವಿಷಕಾರಿ ಸ್ಯಾನಿಟೈಸರ್ ನ ಬದಲಾಗಿ ಮನೆಯಲ್ಲೇ ಸ್ಯಾನಿಟೈಸರ್ ತಯಾರಿಸಿ ಎಂದಿರುವ ವೈದ್ಯರು ಅದನ್ನು ತಯಾರಿಸುವ ವಿಧಾನವನ್ನು ತಿಳಿಸಿದ್ದಾರೆ.
ಮೂರು ಟೀ ಸ್ಪೂನ್ ಶುಧ್ಧವಾದ ಕೊಬ್ಬರಿ ಎಣ್ಣೆಯನ್ನು ಒಂದು ಕಪ್ ಗೆ ಹಾಕಿ. ಅದಕ್ಕೆ ಮೂರು ಎಸಳು ಬೆಳ್ಳುಳ್ಳಿಯನ್ನು ಚೆನ್ನಾಗಿ ಹಿಚುಕಿ ಮಿಶ್ರ ಮಾಡಿ. ಅನಂತರ ಎಲ್ಲಿಗಾದರೂ ಹೋಗುವಾಗ ಆ ಎಣ್ಣೆಯ ಮಿಶ್ರಣಕ್ಕೆ ಮೂರು ಬೆರಳನ್ನು ಮುಳುಗಿಸಿ ಕೈಗೆ ಚೆನ್ನಾಗಿ ಹಚ್ಚಿಕೊಳ್ಳಿ. ಹಾಗೆಯೇ ಮೂಗಿನ ಹತ್ತಿರ ಹಚ್ಚಿಕೊಳ್ಳಿ. ಎಣ್ಣೆಯನ್ನು ಬಿಸಿ ಮಾಡುವ ಅಗತ್ಯವಿಲ್ಲ. ಇದರಿಂದ ವೈರಸ್ ಕರಗಿ ನಾಶವಾಗುತ್ತದೆ ಎಂದು ತಿಳಿಸಿದ್ದಾರೆ.
ಕಣ್ಣಿಗೆ ಕೂಡ ಕೊರೊನಾದಿಂದ ಸಮಸ್ಯೆಯಾಗುವುದುಂಟು. ಅಂತಹ ಸಂದರ್ಭದಲ್ಲಿ ಕಣ್ಣಿನಲ್ಲಿ ವಿಪರೀತ ತುರಿಕೆಯಾಗಿ ನೋವು ಉಂಟಾಗುತ್ತದೆ. ಇದಕ್ಕೆ ಪರಿಹಾರವನ್ನು ಡಾ.ಬಿ.ಎಂ ಹೆಗ್ಡೆ ಸೂಚಿಸಿದ್ದಾರೆ.
ಕುದಿಸಿ ಆರಿಸಿದ ಮೂರು ಟೀ ಸ್ಪೂನ್ ನೀರಿಗೆ ಎರಡು ತುಳಸಿ ಎಲೆಯನ್ನು ಚೆನ್ನಾಗಿ ಹಿಚುಕಿ. ನಂತರ ಬಿಳಿ ಬಟ್ಟೆಯಲ್ಲಿ ಆ ನೀರನ್ನು ಸೋಸಿ ದಿನಕ್ಕೆ ಎರಡು ಹೊತ್ತು ಎರಡು ಕಣ್ಣುಗಳಿಗೂ ತಲಾ ಐದು ಹನಿಯನ್ನು ಬಿಡಬೇಕು. ಇದರಿಂದ ಕಣ್ಣಿನಲ್ಲಿ ವೈರಸ್ ಇದ್ದರೆ ನಾಶವಾಗುತ್ತದೆ ಎಂದು ಹೇಳಿದ್ದಾರೆ.