ಬಳ್ಳಾರಿ : ಇದ್ದಾಗ ಒಂದು ಇಲ್ಲದಿದ್ದಾಗ ಒಂದು, ಮನುಷ್ಯನ ಬದುಕೇ ಹೀಗೆ. ಅದ್ರಲ್ಲೂ ಕೊರೋನಾ ಕಾರಣದಿಂದಾಗಿ ಮನುಷ್ಯ ಮನುಷ್ಯ ಮುಟ್ಡುವುದಕ್ಕೇ ಹೆದರುವ ಸ್ಥಿತಿ ನಿರ್ಮಾಣ ಆಗಿದೆ. ನಿನ್ನೆ ಬಳ್ಳಾರಿಯಲ್ಲಿ ನಡೆದ ಕೊರೊನಾದಿಂದ ಮೃತಪಟ್ಟವರ ಅಮಾನವೀಯ ಅಂತ್ಯಸಂಸ್ಕಾರ ಅನಾಗರಿಕತೆಯ ಮತ್ತೊಂದು ಮುಖದರ್ಶನ ಮಾಡಿಸಿದೆ.
ನಿನ್ನೆ ಜಿಲ್ಲೆಯಲ್ಲಿ ಒಂಬತ್ತು ಜನ ಕೊವಿಡ್ ನಿಂದ ಮೃತಪಟ್ಟಿದ್ರು. ಅವರೆಲ್ಲರ ಅಂತ್ಯ ಸಂಸ್ಕಾರವನ್ನ ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಇಲಾಖೆ ಮಾಡಿದೆ. ಆದರೆ ಅದು ಮಾಡಿರುವ ಅಂತ್ಯ ಸಂಸ್ಕಾರ ಎಷ್ಟು ಕೀಳುಮಟ್ಟದ್ದು ಎನ್ನುವುದು ವಿಡಿಯೋ ದೃಶ್ಯವಾಳಿಗಳೇ ಸಾಕ್ಷಿ ಹೇಳುತ್ತಿವೆ.
ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಕಳೇಬರವನ್ನು ಅದರ ವಾರಸುದಾರರಿಗೆ ನೀಡಲಾಗುವುದಿಲ್ಲ. ಅಂತ್ಯಕ್ರಿಯೆ ಜಾಗದ ಸುತ್ತ ಬಫರ್ ಜೋನ್ ಮಾಡಿ ಯಾರೂ ಸುಳಿಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಭಯ ಮತ್ತು ಆತಂಕಗಳೇನೋ ಸರಿ, ಆದರೆ ಕನಿಷ್ಟ ಮಟ್ಟದ ಗೌರವವನ್ನೂ ನೊಡದೆ ಶವಗಳ ಸಂಸ್ಕಾರವನ್ನು ಸಿಬ್ಬಂದಿ ಮಾಡಿರುವುದು ಆಕ್ರೋಶ ಗುರಿಯಾಗಿದೆ.
ಕಸವನ್ನು ಗುಂಡಿಗೆ ಎಸೆಯುವ ಹಾಗೆ ಶವಗಳನ್ನು ಬೇಕಾಬಿಟ್ಟಿ ಎಸೆದು ಹೋಗುತ್ತಿರುವ ದೃಶ್ಯಾವಳಿಗಳು ಅಮಾನವೀಯ ಸ್ಥಿತಿಯನ್ನ ಎತ್ತಿ ತೋರಿಸುತ್ತವೆ. ಕೊರೊನಾದಿಂದ ಸತ್ತವರಿಗೆ ಹೂಳುವುದಕ್ಕೂ ಜಾಗ ಕೊಡಲು ನಿರಾಕರಿಸುತ್ತಿರುವುದು ಒಂದು ಕಡೆ ಇನ್ನೊಂದೆಡೆ ಕಸದ ಹಾಗೆ ಗುಂಡಿಗೆ ಎಸೆಯುವುದು ಪರಿಸ್ಥಿತಿ ಕರಾಳತೆ ಹಿಡಿದ ಕನ್ನಡಿಯಾಗಿದೆ.