Innocent passes away : ಮಲಯಾಳಂನ ಖ್ಯಾತ ಹಿರಿಯ ನಟ ಇನ್ನೋಸೆಂಟ್ ನಿಧನ….
ಮಲಯಾಳಂನ ಖ್ಯಾತ ಹಿರಿಯ ನಟ ಹಾಗೂ ಮಾಜಿ ಲೋಕಸಭಾ ಸದಸ್ಯ ಇನ್ನೋಸೆಂಟ್ ಭಾನುವಾರ ತಡರಾತ್ರಿ ಅನಾರೋಗ್ಯದಿಂದಾಗಿ ಕೊಚ್ಚಿಯ ವಿಪಿಎಸ್ ಲೇಕ್ಶೋರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾತ್ರಿ 10.30ರ ಸುಮಾರಿಗೆ ಇನ್ನೋಸೆಂಟ್ ಅವರ ಅರೋಗ್ಯ ಪರಿಸ್ಥಿತಿ ತೀವ್ರ ರೀತಿಯಲ್ಲಿ ಹದಗೆಟ್ಟ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ಲೇಕ್ಶೋರ್ ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನೋಸೆಂಟ್ ಅವರಿಗೆ 75 ವರ್ಷ ವಯಸ್ಸಾಗಿತ್ತು. ಇನ್ನೋಸೆಂಟ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ಹಾಸ್ಯ ನಟನಾಗಿ ನಟಿಸಿದ್ದಾರೆ. ಎಡಪಕ್ಷಗಳ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ನಂತರ 2014 ರಿಂದ 2019 ರವರೆಗೆ ಕೇರಳದ ಚಾಲಕ್ಕುಡಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಕಾರ್ಯನಿರ್ವಹಿಸಿದ್ದರು. ಅವರು ಹಲವಾರು ವರ್ಷಗಳ ಕಾಲ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
2012 ರಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಬದುಕುಳಿದಿದ್ದರು. ಆದರೆ, ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 3 ರಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯ ಮತ್ತು ಹೃದಯ ಸ್ತಂಭನ ಅವರ ಸಾವಿಗೆ ಕಾರಣವಾಯಿತು ಎಂದು ವೈದ್ಯರು ಹೇಳಿದ್ದಾರೆ. ಇನ್ನೋಸೆಂಟ್ ನಿಧನಕ್ಕೆ ಮಲಯಾಳಂ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Innocent passes away : Malayalam’s famous veteran actor Innocent passes away….