ಕಳೆದ ಕೆಲವು ದಿನಗಳಿಂದ ತೌಕ್ತೆ ಚಂಡಮಾರುತ ಸೃಷ್ಟಿಸಿರುವ ಅವಾಂತರದ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಕರ್ನಾಟಕ, ಲಕ್ಷದ್ವೀಪ, ಕೇರಳ, ಮಹಾರಾಷ್ಟ್ರ, ಮತ್ತು ಗುಜರಾತ್ ರಾಜ್ಯಗಳಲ್ಲಿ ತೌಕ್ತೆ ಅಪಾರ ಹಾನಿಗೆ ಕಾರಣವಾಗಿದೆ.
ಆದರೆ ಚಂಡಮಾರುತ ಹೇಗೆ ಉಂಟಾಗುತ್ತದೆ ಎಂಬ ಬಗ್ಗೆ ಹಲವರಿಗೆ ತಿಳಿದಿಲ್ಲ. ಅದರಲ್ಲೂ ಚಂಡಮಾರುತಕ್ಕೆ ಹೇಗೆ ಹೆಸರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಯಿಳಿದಿರುವುದು ವಿರಳ ಜನರಿಗೆ ಮಾತ್ರ.
ಸಮುದ್ರ ತೀರ ಪ್ರದೇಶಗಳಲ್ಲಿ ಚಂಡಮಾರುತದ ಅವಾಂತರ ಹೆಚ್ಚು. ಚಂಡಮಾರುತಕ್ಕೆ ಕರಾವಳಿಭಾಗದ ಜನ ಸಾಕಷ್ಟು ಹಾನಿಗೊಳಗಾಗುತ್ತಾರೆ. ವಾಯುಮಂಡಲದಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಸೃಷ್ಟಿಯಾದಾಗ ಅವುಗಳ ಸುತ್ತ ಚಕ್ರವ್ಯೂಹಾಕಾರದಲ್ಲಿ ಉಂಟಾಗುವ ಬಿರುಗಾಳಿ ಮತ್ತು ತೀವ್ರ ಮಳೆಯೇ ಚಂಡಮಾರುತ.
ಭೂಮಿ ತಿರುಗುವ ದಿಕ್ಕಿನಲ್ಲೇ ಇದು ಸುತ್ತುತ್ತದೆ. ಭೂಮಿಯ ಉತ್ತರ ಗೋಳದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಚಂಡಮಾರುತ ಸುತ್ತುತ್ತದೆ. ಕಡಿಮೆ ವಾಯುಭಾರ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ದೊಡ್ಡ ಪ್ರಮಾಣದ ಚಂಡಮಾರುತಗಳೇಳುತ್ತವೆ.
ನಾಡಿನತ್ತ ಬಂದಂತೆಲ್ಲಾ ಚಂಡಮಾರುತದ ತೀವ್ರತೆ ಕಡಿಮೆಯಾಗುತ್ತದೆ. ಆದರೆ, ಭೀಕರ ಮಳೆ ಒಳಪ್ರದೇಶಗಳನ್ನ ಬಾಧಿಸುವ ಸಾಧ್ಯತೆ ಇರುತ್ತದೆ.
ಇನ್ನು ಚಂಡಮಾರುತಗಳಿಗೆ ಹೆಸರಿಸುವದು ತುಂಬಾ ಇಂಟರೆಸ್ಟಿಂಗ್ ವಿಚಾರ. ವಿಶೇಷವೆನ್ನಿಸುವ, ಚಿಕ್ಕದಾದ, ಮತ್ತು ಉಚ್ಛಾರ ಮಾಡಲು ಸುಲಭವೆನ್ನಿಸುವ ಹೆಸರುಗಳಿಂದ ಚಂಡಮಾರುತಗಳನ್ನು ಕರೆಯಲಾಗುತ್ತದೆ.
ವಿಶ್ವ ಪವನಶಾಸ್ತ್ರ ಸಂಘಟನೆ ಪ್ರತಿ ವರ್ಷ 21 ಹೆಸರುಗಳನ್ನು ಪಟ್ಟಿ ಮಾಡುತ್ತದೆ. 1971ರಿಂದೀಚೆಗೆ, ಆ ಹೆಸರುಗಳನ್ನು , ಲಿಂಗಗಳ ಆಧಾರದ ಮೇಲೆ ಇಡುತ್ತಾ ಬರಲಾಗುತ್ತಿದೆ. ಆದರೆ ಈ ಪಟ್ಟಿಯಿಂದ ಇಂಗ್ಲಿಷ್ ವರ್ಣಮಾಲೆಯ q,u,x,z ಅಕ್ಷರಗಳನ್ನು ಹೊರತುಪಡಿಸಿ ಮಿಕ್ಕ ಅಕ್ಷರಗಾಳಿಂದ ಪ್ರಾರಂಭವಾಗುವಂತೆ ಚಂಡಮಾರುತಗಳಿಗೆ ಹೆಸರಿಡಲಾಗುತ್ತದೆ.
ಇನ್ನು, ಚಂಡಮಾರುತವನ್ನು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಅಟ್ಲಾಂಟಿಕ್ ಪ್ರದೇಶದಲ್ಲಿ ಹರಿಕೇನ್, ಪೆಸಿಫಿಕ್ ತೀರದಲ್ಲಿ ಟೈಫೂನ್ ಮತ್ತು ಹಿಂದೂ ಮಹಾ ಸಾಗರದ ಭಾಗದಲ್ಲಿ ಸೈಕ್ಲೋನ್ ಎಂದು ಕರೆಯುತ್ತಾರೆ.