ಉಡುಪಿ : ಆಗಸ್ಟ್ 05 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಇದರ ಮಧ್ಯೆ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹಿಂದೂ ಮುಖಂಡ ಪ್ರವೀಣ್ ತೊಗಾಡಿಯಾ ಅವರನ್ನು ಆಹ್ವಾನಿಸದ್ದಕ್ಕೆ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಫುಲ್ ಗರಂ ಆಗಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ತೊಗಾಡಿಯಾರನ್ನು ಆಹ್ವಾನಿಸದಿರುವುದು ನೋವು ತಂದಿದೆ. ಅವರು ಸಂಸಾರ ದೂರವಿಟ್ಟು 32 ವರ್ಷ ತ್ಯಾಗದ ಜೀವನ ನಡೆಸಿದವರು. ತೊಗಾಡಿಯಾ ರಾಮಜನ್ಮಭೂಮಿಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ಎಲ್ಲಾ ದ್ವೇಷಗಳನ್ನು ಮರೆತು ತೊಗಾಡಿಯಾರನ್ನು ಆಹ್ವಾನಿಸಬೇಕು. ಇದು ಲಕ್ಷಾಂತರ ಹಿಂದೂಗಳ ತುಡಿತ. ಈಗಲೂ ಕಾಲ ಮಿಂಚಿಲ್ಲ ಇನ್ನಾದರೂ ಆಹ್ವಾನಿಸಿ ಎಂದು ಆಗ್ರಹಿಸಿದ್ದಾರೆ.
ನಮ್ಮ ನೆಚ್ಚಿನ ಪ್ರಧಾನಿ ಮೋದಿ ಮೂಲಕ ಶಿಲಾನ್ಯಾಸ ಆಗುತ್ತಿರುವುದು ಖುಷಿಕೊಟ್ಟಿದೆ. ಶಿಲಾನ್ಯಾಸದ ದಿನವೇ ನಮಗೆ ದೀಪಾವಳಿ, ಅಂದೇ ರಾಮನವಮಿ ಎಂದ ಮುತಾಲಿಕ್, ರಾಮ ಮಂದಿರ ವಿರೋಧಿಸುವವರು ಸಂವಿಧಾನ ವಿರೋಧಿಗಳು. ನೀವು ಸುಪ್ರೀಂಕೋರ್ಟ್ ತೀರ್ಪಿಗೆ ವಿರೋಧ ಮಾಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.