ಐಪಿಎಲ್ 2020 – ಕೆಕೆಆರ್ ತಂಡವನ್ನು ಸೇರಿಕೊಂಡ ಅಮೆರಿಕಾದ ವೇಗಿ ಆಲಿ ಖಾನ್
ಅಮೆರಿಕಾದ ವೇಗದ ಬೌಲರ್ ಆಲಿ ಖಾನ್ ಅವರು ಯುಎಇಗೆ ಆಗಮಿಸಿದ್ದಾರೆ. ಆಲಿ ಖಾನ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಲಿದ್ದಾರೆ. ಈ ಮೂಲಕ ಐಪಿಎಲ್ ನಲ್ಲಿ ಆಡಲಿರುವ ಮೊದಲ ಅಮೆರಿಕಾದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ಸ್ಟೈಲೀಶ್ ಲುಕ್ ನಲ್ಲಿ ಬಂದಿರುವ ಆಲಿ ಖಾನ್ ಗೆ ಕೆಕೆಆರ್ ತಂಡದ ಸ್ವಾಗತ ಕೋರಿದೆ. ಆಲಿಖಾನ್ ಅವರು ಅಬುಧಾಬಿಯ ಹೊಟೇಲ್ಗೆ ಆಗಮಿಸುತ್ತಿರುವ ವಿಡಿಯೋವನ್ನು ಕೆಕೆಆರ್ ತಂಡ ತನ್ನ ಇನ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದೆ.
29ರ ಹರೆಯದ ಆಲಿ ಖಾನ್ ಅವರು ಕಡೆಯ ಕ್ಷಣದಲ್ಲಿ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ನ ವೇಗಿ ಹ್ಯಾರಿ ಗರ್ನೆಯ್ ಅವರ ಬದಲಿಗೆ ಕೆಕೆಆರ್ ಟೀಮ್ ಮ್ಯಾನೇಜ್ ಮೆಂಟ್ ಆಲಿಖಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಆಲಿ ಖಾನ್ ಅವರು ಗಂಟೆಗೆ 140 ಕಿಲೋ ಮೀಟರ್ಗಿಂತಲೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಮುಖ್ಯವಾಗಿ ತನ್ನ ಯಾರ್ಕರ್ ಎಸೆತಗಳ ಮೂಲಕ ಆಲಿಖಾನ್ ಅವರು ಗಮನ ಸೆಳೆಯುತ್ತಾರೆ.
ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಲಿ ಖಾನ್ ಅವರು ಟ್ರಿಂಬಾಗೋ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. ಟೂರ್ನಿಯಲ್ಲಿ ಅವರು ಎಂಟು ಪಂದ್ಯಗಳಲ್ಲಿ ಎಂಟು ವಿಕೆಟ್ ಗಳನ್ನು ಕಬಳಿಸಿದ್ದರು.
ಅಂದ ಹಾಗೇ ಆಲಿಖಾನ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಡ್ವೇನ್ ಬ್ರೇವೋ. 2018ರ ಕೆನಡಾ ಗ್ಲೋಬಲ್ ಟಿ-ಟ್ವೆಂಟಿ ಟೂರ್ನಿಯಲ್ಲಿ ಆಡಿದ್ದ ಆಲಿಖಾನ್ ಅವರನ್ನು ಬ್ರೇವೋ ಅವರು ಸಿಪಿಎಲ್ಗೆ ಕರೆ ತಂದಿದ್ರು. ಇನ್ನು ಟ್ರಿಂಬಾಗೋ ನೈಟ್ ರೈಡರ್ಸ್ ಮತ್ತು ಕೆಕೆಆರ್ ತಂಡಗಳ ಮಾಲೀಕರು ಶಾರೂಕ್ ಖಾನ್.
ಕೋವಿಡ್ ಮಾರ್ಗಸೂಚಿಯ ಪ್ರಕಾರ ಈ ಬಾರಿಯ ಐಪಿಎಲ್ ಟೂರ್ನಿ ನಡೆಯಲಿದೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಟೂರ್ನಿ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆಯಲಿದೆ.