ಐಪಿಎಲ್ 2020 – ಕೆಕೆಆರ್ ಗೆ ಚಕ್ರವರ್ತಿಯ ಅಭಯ.. ಡೆಲ್ಲಿ ಹುಡುಗರಿಗೆ ಸೋಲಿನ ತಾಪ..!
ಗೆಲುವಿನ ಆಮಲಿನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲಿನತ್ತ ಮುಖ ಮಾಡಿದೆ.
ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಡೆಲ್ಲಿ ಹುಡುಗರು ಬರ್ತಾ ಬರ್ತಾ ಮಂಕಾಗುತ್ತಿದ್ದಾರೆ.
ಅತೀಯಾದ ಆತ್ಮವಿಶ್ವಾಸವೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಳುವಾಗುತ್ತಿದೆ ಅಂತ ಅನ್ನಿಸುತ್ತಿದೆ.
ಹೌದು, ಐಪಿಎಲ್ ಟೂರ್ನಿಯ 42ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 59 ರನ್ ಗಳಿಂದ ಕೆಕೆಆರ್ ತಂಡಕ್ಕೆ ಶರಣಾಗಿದೆ.
ಅಬುಧಾಬಿಯಲ್ಲಿ ನಡೆದ ಟೂರ್ನಿಯ 42ನೇ ಪಂದ್ಯದಲ್ಲಿ ಕೆಕೆಆರ್ ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು.
ಅಬ್ಬರದ ಆರಂಭ ಪಡೆದ್ರೂ ಕೆಕೆಆರ್ ತಂಡ 42 ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಶುಬ್ಮನ್ ಗಿಲ್ 9 ರನ್, ರಾಹುಲ್ ತ್ರಿಪಾಠಿ 13 ರನ್ ಹಾಗೂ ದಿನೇಶ್ ಕಾರ್ತೀಕ್ 3 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದಿದ್ದರು.
ಆಗ ಆರಂಭಿಕ ನಿತೇಶ್ ರಾಣ ಜೊತೆಗೂಡಿದ ಸುನೀಲ್ ನರೇನ್ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು.
ನೋಡ ನೋಡುತ್ತಲೇ ಡೆಲ್ಲಿ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ್ರು. ಒಂದು ಕಡೆ ನಿತೀಶ್ ರಾಣಾ.. ಮತ್ತೊಂದು ಕಡೆ ಸುನೀಲ್ ನರೇನ್.
ಇವರಿಬ್ಬರ ಬ್ಯಾಟಿಂಗ್ ವೈಖರಿಗೆ ಡೆಲ್ಲಿ ಬೌಲರ್ ಗಳು ಬೆಚ್ಚಿಬಿದ್ದಿದ್ದರು.
ನಾಲ್ಕನೇ ವಿಕೆಟ್ ಗೆ ನರೇನ್ ಮತ್ತು ರಾಣಾ 115 ರನ್ ಕಲೆ ಹಾಕಿದ್ದರು.
ಈ ಹಂತದಲ್ಲಿ 32 ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ 64 ರನ್ ಸಿಡಿಸಿದ್ರು.
ಮತ್ತೊಂದೆಡೆ ನಿತೇಶ್ ರಾಣಾ ಸ್ಪೋಟಕವಾಗಿ ಬ್ಯಾಟ್ ಬೀಸಿದ್ರು.
ರಾಣಾ ಅವರು 53 ಎಸೆತಗಳಲ್ಲಿ 13 ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ ಆಕರ್ಷಕ 81 ರನ್ ಸಿಡಿಸಿದ್ರು.
ಇಯಾನ್ ಮೊರ್ಗಾನ್ 17 ರನ್ ಗಳಿಸಿದ್ರು. ಅಂತಿಮವಾಗಿ ಕೆಕೆಆರ್ ತಂಡ 6 ವಿಕೆಟ್ ನಷ್ಟಕ್ಕೆ 194 ರನ್ ದಾಖಲಿಸಿತ್ತು.
ಗೆಲ್ಲಲು ಕಠಿಣ ಸವಾಲನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಮುಗ್ಗರಿಸಿತ್ತು.
ಅಜ್ಯಂಕ್ಯಾ ರಹಾನೆ ಶೂನ್ಯ ಸುತ್ತಿದ್ರೆ, ಶಿಖರ್ ಧವನ್ 6 ರನ್‍ಗೆ ಹೋರಾಟ ಮುಗಿಸಿದ್ರು.
ನಂತರ ನಾಯಕ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ತಂಡಕ್ಕೆ ಚೇತರಿಕೆ ನೀಡುವ ಸೂಚನೆ ನೀಡಿದ್ರು.
ಆದ್ರೆ ರಿಷಬ್ ಪಂತ್ ಅಬ್ಬರ 27 ರನ್ ಗೆ ಕೊನೆಗೊಂಡಿತ್ತು. ಶಿಮ್ರೋನ್ ಹೆಟ್ಮೇರ್ 10 ರನ್ ಗೆ ಸೀಮಿತವಾದ್ರು.
ಹಾಗೇ ನಾಯಕ ಶ್ರೇಯಸ್ ಆಟ 47 ರನ್ ಗೆ ಕೊನೆಗೊಂಡಿತ್ತು.
ಇನ್ನುಳಿದಂತೆ ಮಾರ್ಕೊಸ್ ಸ್ಟೋನಿಸ್ 6 ರನ್, ಅಕ್ಸರ್ ಪಟೇಲ್ 9 ರನ್, ಕಾಗಿಸೊ ರಬಾಡ 9 ರನ್ ಹಾಗೂ ಅಶ್ವಿನ್ ಅಜೇಯ 14 ರನ್ ದಾಖಲಿಸಿದ್ರು.
ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ದಾಖಲಿಸಿತ್ತು.
20 ರನ್ ಗೆ ಐದು ವಿಕೆಟ್ ಉರುಳಿಸಿದ್ದ ವರುಣ್ ಚಕ್ರವರ್ತಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.