ಐಪಿಎಲ್ 2020- ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಶಾಕ್ ನೀಡಿದ ಸಿಎಸ್ ಕೆ
ಐಪಿಎಲ್ ಟೂರ್ನಿಯ 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆಘಾತ ನೀಡಿದೆ.
ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಸಿಎಸ್ ಕೆ ತಂಡ 9 ವಿಕೆಟ್ ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪರಾಭವಗೊಳಿಸಿತ್ತು.
ಈ ಮೂಲಕ ಕಿಂಗ್ಸ್ ಇಲೆವೆನ್ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡಿದೆ. ಟೂರ್ನಿಯ ಕೊನೆಯ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸಿಎಸ್ ಕೆ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದುಕೊಂಡಿತ್ತು.
ಟಾಸ್ ಗೆದ್ದ ಸಿಎಸ್ ಕೆ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕ ಕಿಂಗ್ಸ್ ಇಲೆವೆನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು.
ಮಯಾಂಕ್ ಅಗರ್ ವಾಲ್ ಮತ್ತು ಕೆ.ಎಲ್. ರಾಹುಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ್ರು.
ಆದ್ರೆ ಇವರಿಬ್ಬರ ಆರ್ಭಟ ಹೆಚ್ಚು ಸಮಯ ಉಳಿಯಲಿಲ್ಲ. ಮಯಾಂಕ್ ಅಗರ್ ವಾಲ್ 15 ಎಸೆತಗಳಲ್ಲಿ ಐದು ಬೌಂಡರಿಗಳ ಮೂಲಕ 26 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ನಂತರ ರಾಹುಲ್ ಕೂಡ 29 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಈ ಹಂತದಲ್ಲಿ ಚೆನ್ನೈ ಬೌಲರ್ ಗಳು ಮೇಲುಗೈ ಸಾಧಿಸಿದ್ರು. ನಿಕೊಲಾಸ್ ಪೂರನ್ 2 ರನ್ ಗೆ ಸೀಮಿತವಾದ್ರು.
ಹಾಗೇ ಅಪಾಯಕಾರಿ ಕ್ರಿಸ್ ಗೇಲ್ ರನ್ ಗಳಿಸಲು ಪರದಾಟ ನಡೆಸಿದ್ರು. 19 ಎಸೆತಗಳಲ್ಲಿ ಗೇಲ್ ಗಳಿಸಿದ್ದು ಕೇವಲ 12 ರನ್.
ಇನ್ನು ಮನ್ ದೀಪ್ ಸಿಂಗ್ 14 ರನ್ ಗಳಿಸಿದ್ರು. ಹಾಗೇ ಜೇಮ್ಸ್ ನಿಶಾಮ್ 2 ರನ್ ಮತ್ತು ಕ್ರಿಸ್ ಜೋರ್ಡಾನ್ ಅಜೇಯ 4 ರನ್ ಗಳಿಸಿದ್ರು.
ಮತ್ತೊಂದೆಡೆ ದೀಪಕ್ ಹೂಡಾ ಏಕಾಂಗಿ ಹೋರಾಟ ನಡೆಸಿದ್ರು. ಬಿರುಸಿನ ಆಟವನ್ನಾಡಿದ್ದ ದೀಪಕ್ ಹೂಡಾ ಅವರು 30 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ ಅಜೇಯ 62 ರನ್ ಸಿಡಿಸಿದ್ರು.
ಅಂತಿಮವಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 6 ವಿಕೆಟ್ ನಷ್ಟಕ್ಕೆ 153 ರನ್ ದಾಖಲಿಸಿತ್ತು.
ಸಿಎಸ್ ಕೆ ತಂಡದ ಪರ ಲುಂಗಿ ಎನ್‍ಗಿಡಿ ಮೂರು ವಿಕೆಟ್ ಕಬಳಿಸಿ ಕಿಂಗ್ಸ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದ್ರು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸವಾಲಿಗೆ ಸಿಎಸ್ ಕೆ ದಿಟ್ಟ ಉತ್ತರವನ್ನೇ ನೀಡಿತ್ತು.
ಮೊದಲ ವಿಕೆಟ್ ಗೆ ಋತುರಾಜ್ ಗಾಯಕ್ವಾಡ್ ಮತ್ತು ಫಾಪ್ ಡು ಪ್ಲೇಸಸ್ ಅವರು 82 ರನ್ ಕಲೆ ಹಾಕಿದ್ರು.
ಈ ಹಂತದಲ್ಲಿ 34 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಅಜೇಯ 48 ರನ್ ಗಳಿಸಿದ್ರು.
ಇನ್ನೊಂದೆಡೆ ಋತುರಾಜ್ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ್ರು. ಟೀಕೆ ಮಾಡಿದವರಿಗೆ ತಕ್ಕ ಉತ್ತರವನ್ನೂ ನೀಡಿದ್ರು.
ಅಲ್ಲದೆ ಟೂರ್ನಿಯಲ್ಲಿ ಸತತ ಮೂರು ಅರ್ಧಶತಕ ದಾಖಲಿಸಿ ಮಿಂಚು ಹರಿಸಿದ್ರು. ಗಾಯಕ್ವಾಡ್ 49 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ ಅಜೇಯ 62 ರನ್ ಸಿಡಿಸಿದ್ರು.
ಇನ್ನೊಂದೆಡೆ ಅಂಬಟಿ ರಾಯುಡು ಅಜೇಯ 30 ರನ್ ಗಳಿಸಿದ್ರು. ಕೊನೆಗೂ ಟೂರ್ನಿಯ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 1 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.
ಅಮೋಘ ಆಟವನ್ನಾಡಿದ್ದ ಸಿಎಸ್ ಕೆ ತಂಡದ ಆರಂಭಿಕ ಋತುರಾಜ್ ಗಾಯಕ್ವಾಡ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.